

ಯಲಹಂಕ : ಯಲಹಂಕ ಕ್ಷೇತ್ರ ವ್ಯಾಪ್ತಿಯ ಅಟ್ಟೂರು ಮತ್ತು ಯಲಹಂಕ ಉಪನಗರ ವಾರ್ಡ್‌ನ ರಸ್ತೆ, ಚರಂಡಿ ಮತ್ತು ಸ್ಯಾನಿಟರಿ ಅಭಿವೃದ್ಧಿಗೆ ಸಂಬಂಧಪಟ್ಟಂತೆ 12 ಕೋಟಿ ರೂ. ಅಂದಾಜು ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಎಸ್.ಆರ್.ವಿಶ್ವನಾಥ್ ಶುಕ್ರವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಆರ.ವಿಶ್ವನಾಥ್, ಯಲಹಂಕ ನಗರ ವ್ಯಾಪ್ತಿಯ ಅಟ್ಟೂರು ವಾರ್ಡ್‌ನ ಅನಂತಪುರ, ಬಾಲಾಜಿ ಲೇಔಟ್, ಆಂದ್ರ ಲೇಔಟ್, ಅಟ್ಟೂರು ಲೇಔಟ್, ಎಸ್ಕಾರ್ಟ್ ಇಂಜಿನಿಯರಿಂಗ್ ಲೇಔಟ್, ಬಿಎಚ್‌ಇಎಲ್ ಲೇಔಟ್, ಹರಿರಾಜ ಲೇಔಟ್, ಅಯ್ಯಪ್ಪ ಲೇಔಟ್, ಆದಿತ್ಯ ನಗರ ಫೇಸ್ 1, ಭರತ್ ನಗರ, ಎಂ.ಎಸ್.ಪಾಳ್ಯ, ಸಾಯಿನಗರ ಫೇಸ್ 1 ರಲ್ಲಿ ಮುಖ್ಯ ರಸ್ತೆ, ಅಡ್ಡರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅಂತೆಯೇ ಯಲಹಂಕ ಉಪನಗರ ವಾರ್ಡ್ 4ರ ವ್ಯಾಪ್ತಿಯ ಮಾತೃ ಬಡಾವಣೆಯಿಂದ ಶಾರದಾ ನಗರದವರೆಗೆ ಸಂಪರ್ಕ ಕಲ್ಪಿಸುವ ಚರಂಡಿ ಅಭಿವೃದ್ಧಿ ಕಾಮಗಾರಿ, ಚಿಕ್ಕಬೊಮ್ಮಸಂದ್ರದಲ್ಲಿ ಸ್ಯಾನಿಟರಿ ಕೋರ್ ಕಾಮಗಾರಿ, ಚಿಕ್ಕಬೊಮ್ಮಸಂದ್ರ, ಸೋಮೇಶ್ವರನಗರ, ಅಳ್ಳಾಳಸಂದ್ರ, ಅಳ್ಳಾಳಸಂದ್ರದ ಎಸ್ಸಿ ಎಸ್ಟಿ ವಸತಿ ಪ್ರದೇಶ, ಅಂಬೇಡ್ಕರ್ ನಗರ, ಕನಕ ನಗರ, ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ರಸ್ತೆ, ಎಲ್.ಬಿ.ಎಸ್.ನಗರ ಗಳಲ್ಲಿ ಮುಖ್ಯ ರಸ್ತೆ ಮತ್ತು ಅಡ್ಡರಸ್ತೆಗಳ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಸುಮಾರು 12 ಕೋಟಿ ರು.ಅಂದಾಜು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ರಾಜ್ಯ ಸರ್ಕಾರದ ಅನುದಾನದ ಕೊರತೆಯ ನಡುವೆಯೂ ಯಲಹಂಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಟಿತ ವಾಗದಂತೆ ಕಾಳಜಿ ವಹಿಸಲಾಗಿದೆ ಎಂದರು.
ನಗರದೆಲ್ಲೆಡೆ ರಸ್ತೆಗಳು ಗುಂಡಿಗಳು ತುಂಬಿವೆ. ಈ ನಡುವೆ ಬಿಬಿಎಂಪಿ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಾಯಕರು ಯಾವ ಮುಖವಿಟ್ಟುಕೊಂಡು ಜನರ ಬಳಿ ಮತ ಕೇಳುತ್ತಾರೆ ಎಂದು ಟೀಕಿಸಿದ ವಿಶ್ವನಾಥ್, ಯಲಹಂಕ ನಗರ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಬೆಳವಣಿಗೆಗೆ ತಕ್ಕಂತೆ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಬೇಕಾದ ಗುರುತರ ಹೊಣೆ ನಮ್ಮ ಮೇಲಿದೆ. ಸರ್ಕಾರ ಅಭಿವೃದ್ಧಿಗೆ ಹಣ ನೀಡದಿದ್ದರೆ ಕ್ಷೇತ್ರದ ಜನತೆಗೆ ಮುಖ ತೋರಿಸುವುದು ಹೇಗೆ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನೆ ಮಾಡಿದರು.
ಈ ಸಂದರ್ಭದಲ್ಲಿ ಯಲಹಂಕ ನಗರ ಮಂಡಲ ಬಿಜೆಪಿ ಪ್ರಭಾರ ಅಧ್ಯಕ್ಷ ಮುರಾರಿರಾಮು, ಪ್ರಧಾನ ಕಾರ್ಯದರ್ಶಿ ವಿ.ಪವನ್ ಕುಮಾರ್ ಹಾಗೂಮುಖಂಡರಾದ ಎಂ.ಮುನಿರಾಜು, ಮಧುಸೂದನ್, ನಾರಾಯಣಸ್ವಾಮಿ, ರಾಜಣ್ಣ, ಎ.ಸಿ.ಮುನಿಕೃಷ್ಣಪ್ಪ, ವೈ.ಜಿ.ವಸಂತ್ ಇನ್ನಿತರರಿದ್ದರು.