

ಬೆಂಗಳೂರು : ಹೊಸ ಮನೆ ನಿರ್ಮಾಣದ ಸಂದರ್ಭದಲ್ಲಿ ಚಿಕ್ಕ ಚಿಕ್ಕ ವಿಷಯಗಳು ಕೂಡಾ ಮಹತ್ವ ಪಡೆದುಕೊಳ್ಳುತ್ತವೆ. ವಿಷಯ ಚಿಕ್ಕದಾದರೂ ಅವುಗಳ ಪ್ರಭಾವ ಮತ್ತು ಪ್ರಯೋಜನ ದೊಡ್ಡದಾಗಿರುವ ಕಾರಣಕ್ಕೆ ಅವುಗಳನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಅಂತಹದ್ದೊಂದು ಸಣ್ಣ ವಸ್ತು ಮನೆಯಲ್ಲಿ ಅಳವಡಿಸುವ ಲೆಟರ್ ಬಾಕ್ಸ್. ಕಾಲ ಬದಲಾದಂತೆ ಮನುಷ್ಯನ ಅಭಿರುಚಿ ಬದಲಾಗುತ್ತದೆ. ಅಭಿರುಚಿಗೆ ತಕ್ಕಂತೆ ಆಯ್ಕೆ, ಅಲಂಕಾರಗಳು ಬದಲಾಗುತ್ತವೆ. ಹೊಸ ಮನೆ ನಿರ್ಮಿಸುವಾಗ ಮನೆಗೆ ಬೇಕಾದ ಪ್ರತಿ ಅಗತ್ಯ ವಸ್ತುಗಳ ಆಯ್ಕೆಯ ಹಿಂದೆಯೂ ಒಂದು ಅಲಂಕಾರ ಪ್ರಜ್ಞೆ ಇರಬೇಕಾದ್ದು ಅಗತ್ಯ. ಲೆಟರ್ ಬಾಕ್ಸ್ ಪರಿಕಲ್ಪನೆ ಒಂದು ಕಾಲಕ್ಕೆ ಬಹುತೇಕ ಮನೆಗಳಲ್ಲಿ ಅಳವಡಿಸುತ್ತಿದ್ದರು. ಹಳೆಯ ಮನೆಗಳ ಮುಂದೆ ಇಂದಿಗೂ ಸಾಮಾನ್ಯವಾಗಿ ಲೆಟರ್ ಬಾಕ್ಸ್‌ಗಳು ಕಂಡು ಬರುತ್ತವೆ. ಆದರೆ ಇತ್ತೀಚೆಗೆ ಲೆಟರ್ ಬಾಕ್ಸ್ ಅಳವಡಿಕೆ ಕಡಿಮೆಯಾಗುತ್ತಿವೆ. ಲೆಟರ್ ಬಾಕ್ಸ್ ಅಳವಡಿಸುವುದರಿಂದ ಮನೆಗೆ ಬರುವ ಕಾಗದ ಪತ್ರಗಳನ್ನು ಮಳೆ, ಗಾಳಿ ಮತ್ತಿತರ ವಾತಾವರಣದಿಂದ ಉಂಟಾಗಬಹುದಾದ ಹಾನಿಯಿಂದ ರಕ್ಷಿಸಬಹುದು. ಜೊತೆಗೆ ಲೆಟರ್ ಬಾಕ್ಸ್‌ಗಳ ಅಳವಡಿಕೆಯಲ್ಲೂ ಅಲಂಕಾರಿಕವಾಗಿ ಆಯ್ಕೆಗಳಿವೆ. ಮರ, ಲೋಹ, ಫೈಬರ್ ಹಾಗೂ ಆ್ಯಂಟಿಕ್ ಪೆಟ್ಟಿಗೆಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಇತ್ತೀಚೆಗೆ ಡಿಜಿಟಲ್ ಲಾಕ್, ನಂಬರ್ ಲಾಕ್‌ವುಳ್ಳ ಲೆಟರ್‌ಬಾಕ್ಸ್‌ಗಳು ಕೂಡಾ ಬಂದಿವೆ.
ಇತ್ತೀಚೆಗೆ ಡಿಜಿಟಲ್ ಬಳಕೆ ಹೆಚ್ಚಾದ ನಂತರ ಅಂಚೆ ಮೂಲಕ ಲೆಟರ್‌ಗಳನ್ನು ಬರೆಯುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಆದರೆ ಸರ್ಕಾರಿ ಸುತ್ತೋಲೆ, ಸೂಚನೆ, ನೋಟಿಸ್ ಇತ್ಯಾದಿ ಲೆಟರ್‌ಗಳು ಮಾತ್ರ ಅಂಚೆ ಮೂಲಕ ಬರುತ್ತವೆ. ಹಾಗೆ ಬರುವ ಪತ್ರಗಳನ್ನು ಈ ಲೆಟರ್ ಬಾಕ್ಸ್‌ನಲ್ಲಿ ಹಾಕುವುದರಿಂದ ನಿಗದಿತ ಸ್ಥಳದಲ್ಲಿ ಸಿಗುತ್ತವೆ. ಜೊತೆಗೆ ಪ್ರತಿ ತಿಂಗಳು ಬರುವ ವಿದ್ಯುತ್ ಬಿಲ್, ನೀರಿನ ಬಿಲ್ ಇತ್ಯಾದಿ ಬಿಲ್‌ಗಳನ್ನು ಕೂಡಾ ಈ ಲೆಟರ್ ಬಾಕ್ಸ್‌ನಲ್ಲಿ ಹಾಕುವುದರಿಂದ ಸಮಯಕ್ಕೆ ಸರಿಯಾಗಿ ಮನೆ ಮಾಲೀಕರಿಗೆ ಅವು ಸಿಗುತ್ತವೆ. ಕಣ್ತಪ್ಪಿನಿಂದ ಬಿಲ್ ಮಿಸ್ ಆಗಿ, ದಂಡ ಕಟ್ಟುವ ಅಥವಾ ಕನೆಕ್ಷನ್ ರದ್ದುಗೊಳಿಸುವಂತಹ ಸಂದರ್ಭ ಸೃಷ್ಟಿಯಾಗಲಾರದು. ವಿಶೇಷವಾಗಿ ಅಪಾರ್ಟ್‌ಮೆಂಟ್‌ಗಳ ನಿರ್ಮಾಣದಲ್ಲಿ ಲೆಟರ್ ಬಾಕ್ಸ್‌ಗಳನ್ನು ಕಡ್ಡಾಯವಾಗಿ ಅಳವಡಿಸುತ್ತಾರೆ. ಕಾಮನ್ ಏರಿಯಾದಲ್ಲಿ ದೊಡ್ಡ ರ‌್ಯಾಕ್ ಮಾದರಿಯಲ್ಲಿ ಎಲ್ಲ ಮನೆಯ ಸಂಖ್ಯೆಗಳೊಂದಿಗೆ ಲೆಟರ್ ಬಾಕ್ಸ್ ಅಳವಡಿಸಲಾಗುತ್ತದೆ. ಬರುವಂತಹ ಯಾವುದೇ ಲೆಟರ್‌ಗಳು ಅಥವಾ ಬಿಲ್‌ಗಳನ್ನು ಆ ಡಬ್ಬಿಯಲ್ಲಿ ಹಾಕುವುದರಿಂದ ಎಷ್ಟೇ ಮನೆಗಳಿದ್ದರೂ ಗೊಂದಲವಿಲ್ಲದೆ ಆಯಾ ಮಾಲೀಕರಿಗೆ ದೊರೆಯುತ್ತವೆ.