ಸಮೀಕ್ಷೆ ಕುರಿತು ಜಾಗೃತಿಗಾಗಿ ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಜಾಥಾ

census
Published on

ಬೆಂಗಳೂರು : ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ರ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಬುಧವಾರ ಜಾಥಾ ನಡೆಸಲಾಯಿತು.

ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕ -1ರ ಸ್ವಯಂಸೇವಕರು ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಪ್ರಯುಕ್ತ ವಿಜಯನಗರದ ಪ್ರಮುಖ ಬೀದಿಗಳಲ್ಲಿ ತೆರಳಿ ಸಮೀಕ್ಷೆ ಕುರಿತು ಘೋಷಣೆಗಳನ್ನು ಕೂಗಿದರು.

ಜಾಥಾದಲ್ಲಿ ಸಮೀಕ್ಷೆ ನಡೆಯುವ ದಿನಗಳಲ್ಲಿ ಸಾರ್ವಜನಿಕರು ಮನೆಗಳಿಗೆ ಬರುವ ಸಮೀಕ್ಷಕ ಅಧಿಕಾರಿಗಳಿಗೆ ಸಹಕಾರ ನೀಡಬೇಕು. ಸಮೀಕ್ಷೆಯು ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಾನಮಾನದ ವಿಷಯವಾಗಿದ್ದು, ಸಮೀಕ್ಷೆಗೆ ಬೇಕಾದ ಅಗತ್ಯ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿ ಸಹಕರಿಸಬೇಕು. ಇದರಿಂದ ರಾಜ್ಯದ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಬೆಳವಣಿಗೆಯ ವಾಸ್ತವಿಕ ಸ್ಥಿತಿಗತಿ ಅರಿಯುವುದು ಸೇರಿದಂತೆ ಜನಸಮುದಾಯಗಳ ಅಂಕಿ-ಅಂಶಗಳ ಸಂಗ್ರಹ, ಆರ್ಥಿಕ ಬೆಳವಣಿಗೆಯ ಸ್ಥಿತಿಗತಿ ತಿಳಿಯಲು ಸಾಧ್ಯವಾಗುತ್ತದೆ. ಇದರ ಮೂಲಕ ಸರ್ಕಾರ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸಹಕಾರಿಯಾಗಲಿದೆ ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು.

ಸಮೀಕ್ಷಕ ಅಧಿಕಾರಿಗಳು ಮನೆಗೆ ಬಂದಾಗ ತಾಳ್ಮೆಯಿಂದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ. ಮೊಬೈಲ್‌ಗೆ ಬಂದ ಒಟಿಪಿ ನೀಡಿ ಸಹಕರಿಸಿ. ಯಾವುದಾದರೂ ಮನೆ ಸಮೀಕ್ಷೆಯಿಂದ ಹೊರಗುಳಿದರೆ ಅಂತಹ ಸಂದರ್ಭದಲ್ಲಿ ಆಯಾಯ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದರು.

ಜಾಥಾದಲ್ಲಿ ಕಾಲೇಜಿನ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಡಾ. ಎಸ್.ಜಿ.ರಾಘವೇಂದ್ರ, ಉಪನ್ಯಾಸಕಿ ಡಾ. ಉಮಾದೇವಿ, ಎನ್.ಎಸ್.ಎಸ್ ಘಟಕದ ಸ್ವಯಂಸೇವಕರಾದ ಯಶವಂತ್, ಕಾವ್ಯಗೌಡ, ಕಾವ್ಯಶ್ರೀ, ಧನುಷ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net