

ಲೂಸಿಯಾನಾ (ಅಮೆರಿಕ): ಸುಮಾರು 12 ಅಡಿ ಉದ್ದದ ಹೆಬ್ಬಾವೊಂದು ಇಲ್ಲಿಯ ಮಾಲ್‌ನಲ್ಲಿ ತಪ್ಪಿಸಿಕೊಂಡಿದ್ದು, ಇದೀಗ ಎಲ್ಲೆಡೆ ಆತಂಕಕ್ಕೀಡು ಮಾಡಿದೆ.
ಅಮೆರಿಕದ ಲೂಸಿಯಾನಾದ ಬ್ಲೂ ಅಕ್ವೇರಿಯಂನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಹಳದಿ ಬಣ್ಣದ ನೋಡಲು ಸುಂದರವಾಗಿರುವ, ಆದರೆ ಭಯಾನಕವಾಗಿರುವ ಹೆಬ್ಬಾವು ಇದಾಗಿದೆ. ಈ ಮಾಲ್‌ನಲ್ಲಿ 140 ಮಳಿಗೆಗಳು ಇವೆ. ಇದಾಗಲೇ ಎಲ್ಲಾ ಕಡೆಗಳಲ್ಲಿಯೂ ತಜ್ಞರು ಹುಡುಕಾಟ ನಡೆಸಿದ್ದಾರೆ. ಆದರೆ ಇದುವರೆಗೂ ಈ ಹಾವು ಪತ್ತೆಯಾಗಿಲ್ಲ!
ಇದು ಇಲ್ಲಿಯ ಬ್ಲೂ ಮೃಗಾಲಯದ ಹೆಬ್ಬಾವಾಗಿತ್ತು. ಮಾಲ್‌ನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಏಕಾಏಕಿ ಇದು ತಪ್ಪಿಸಿಕೊಂಡು ಬಿಟ್ಟಿದೆ. ಎಲ್ಲಿಗೆ ಹೋಗಿದೆ ಎನ್ನುವುದು ತಿಳಿಯುತ್ತಿಲ್ಲ. ಇದರಿಂದ ಮಾಲ್‌ಗೆ ಜನರನ್ನು ನಿಷೇಧಿಸಲಾಗಿದೆ. ಆದರೆ ಉರಗ ತಜ್ಞರು ಇದರ ಹುಡುಕಾಟ ಮುಂದುವರೆಸಿದ್ದಾರೆ.
ಈ ಮಾಲ್‌ನಲ್ಲಿ ಕೆಲವೊಂದು ಗೋಡೆಗಳಲ್ಲಿ ಅಲಂಕಾರಕ್ಕಾಗಿ ರಂಧ್ರಗಳನ್ನು ಮಾಡಲಾಗಿದೆ. ಈ ರಂಧ್ರದೊಳಗೆ ಹೆಬ್ಬಾವು ಸೇರಿಕೊಂಡಿರುವ ಸಾಧ್ಯತೆ ಇರುವ ಕಾರಣ, ಬಹುತೇಕ ಗೋಡೆಗಳನ್ನು ಕೆಡವಲು ಚಿಂತನೆ ನಡೆಸಲಾಗಿದೆ, ಇದಾಗಲೇ ಕೆಲವು ಕಡೆಗಳ ಗೋಡೆಗಳನ್ನು ಒಡೆದಿದ್ದರೂ ಹಾವು ಮಾತ್ರ ಕಾಣಿಸಿಕೊಂಡಿಲ್ಲ!
ಇದು ಬರ್ಮೀಸ್ ಹೆಬ್ಬಾವಾಗಿದ್ದು, ಮನುಷ್ಯರ ಮೇಲೆ ಆಕ್ರಮಣ ಮಾಡುವುದು ಕಡಿಮೆ. ಆದ್ದರಿಂದ ಯಾರೂ ಹೆದರಬಾರದು ಎಂದು ಇದಾಗಲೇ ತಜ್ಞರು ಹೇಳಿದ್ದರೂ, ಇಲ್ಲಿ ಅಕ್ಕಪಕ್ಕದಲ್ಲಿ ವಾಸವಾಗಿರುವ ಮನೆಯವರ ಸ್ಥಿತಿ ಗಂಭೀರವಾಗಿದೆ! ಅಂದಹಾಗೆ ಈ ಹೆಬ್ಬಾವಿನ ಹೆಸರು ಕಾರಾ. ಸಿಸಿಟಿವಿಗಳ ಪರಿಶೀಲನೆ ನಡೆಯುತ್ತಿದೆ, ಜತೆಗೆ ಮಾಲ್‌ಗೆ ಸಂಪರ್ಕ ಇರುವ ಕೊಳವೆಗಳನ್ನು ಅಕ್ಕ-ಪಕ್ಕದಲ್ಲಿ ಇರುವ ಬೃಹತ್ ರಂಧ್ರಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಈ ಹಾವಿನ ಪ್ರಾಣಕ್ಕೆ ಹಾನಿಯಾಗದಂತೆ ಕಾಪಾಡುವುದೇ ತಮ್ಮ ಕರ್ತವ್ಯ ಎಂದಿದ್ದಾರೆ ಇಲ್ಲಿಯ ಅಧಿಕಾರಿಗಳು.