ಒಂದು ಕುಂಬಳಕಾಯಿಗೆ 47 ಸಾವಿರ ರೂಪಾಯಿ! ಇದ್ಯಾಕೆ ಅಂತೀರಾ? ಇಲ್ಲಿದೆ ನೋಡಿ ವಿಶೇಷತೆ...

pumpkin
Published on

ತಿರುವನಂತಪುರ: ಒಂದು ಕುಂಬಳಕಾಯಿಯ ಬೆಲೆ 47 ಸಾವಿರ ರೂಪಾಯಿ ಎಂದರೆ ನಂಬುವಿರಾ? ನಂಬಲೇಬೇಕು. ಏಕೆಂದರೆ ಕೇರಳದಲ್ಲಿ 5 ಕೆ.ಜಿ ಇರುವ ಕುಂಬಳಕಾಯಿಯು ಈ ಬೃಹತ್​ ಮೊತ್ತಕ್ಕೆ ಮಾರಾಟವಾಗಿದೆ.

ಕೇರಳದ ಇಡುಕ್ಕಿಯ ಗುಡ್ಡಗಾಡು ಪ್ರದೇಶದ ವಲಸೆ ಗ್ರಾಮವಾದ ಚೆಮ್ಮನ್ನಾರ್‌ನಲ್ಲಿ ನಡೆದ ಸಾರ್ವಜನಿಕ ಹರಾಜಿನಲ್ಲಿ 47 ಸಾವಿರ ರೂಪಾಯಿಗೆ ಕುಂಬಳಕಾಯಿ ಮಾರಾಟವಾಗಿದೆ. ಇದು ಈ ಬಾರಿಯ ಓಣಂ ಹಬ್ಬದ ವಿಶೇಷತೆಯಾಗಿದೆ.

ಓಣಂ ಆಚರಣೆಯ ಹಿನ್ನೆಲೆಯಲ್ಲಿ ಕುಂಬಳಕಾಯಿ ಹರಾಜಿನಲ್ಲಿ ಇಟ್ಟಿದ್ದರು. ಹರಾಜು ವೇಳೆ ಸಂಘಟಕರಿಗೆ ಈ ಕುಂಬಳಕಾಯಿಯನ್ನು ಅಲ್ಲಿನ ಸ್ಥಳೀಯರೊಬ್ಬರು ಉಚಿತವಾಗಿ ನೀಡಿದ್ದರು. ಇದನ್ನೇ ಹರಾಜಿನಲ್ಲಿ ಇಟ್ಟಾಗ 47 ಸಾವಿರ ರೂ.ಗೆ ಮಾರಾಟವಾಯಿತು. ಸಾಮಾನ್ಯವಾಗಿ ಇಲ್ಲಿ ನಡೆಯುವ ಹರಾಜಿನಲ್ಲಿ ಟಗರು, ಹುಂಜ ಮುಂತಾದವು 10 ಸಾವಿರ ರೂಪಾಯಿಗೂ ಅಧಿಕ ಬೆಲೆಗೆ ಮಾರಾಟವಾಗುತ್ತವೆ. ಆದರೆ ಇದಕ್ಕಿಂತಲೂ ಹೆಚ್ಚಿನ ಬೆಲೆಗೆ ಕುಂಬಳಕಾಯಿ ಮಾರಾಟವಾಗಿದ್ದು ಒಂದು ದಾಖಲೆಯಾಗಿದೆ. ಓಣಂ ಹಬ್ಬದಂದು ಖರೀದಿ ಮಾಡುವ ಯಾವುದೇ ವಸ್ತುಗಳು ಶುಭದ ಸಂಕೇತ ಎಂದುಕೊಳ್ಳುವ ಕಾರಣ, ಹೀಗೆ ದುಬಾರಿ ಬೆಲೆಗೆ ಹರಾಜಾಗುತ್ತದೆ.

ಈ ವೇಳೆ ಬಿಡ್ಡಿಂಗ್‌ನಲ್ಲೇ ವಿಜೇತರು ಕುಂಬಳಕಾಯಿಯನ್ನು ಹಿಡಿದುಕೊಂಡು ಅಲ್ಲೇ ಪ್ರೇಕ್ಷಕರೆದರು ನರ್ತಿಸಿದರು. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net