

ವಾಷಿಂಗ್ಟನ್: ಅಮೆರಿಕದ 46ನೇ ಅಧ್ಯಕ್ಷರಾಗಿ ಜೋಸೆಫ್ ಬೈಡೆನ್ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ, ತಾವು ಈ ಹಿಂದೆ ಘೋಷಿಸಿರುವಂತೆ ಡೊನಾಲ್ಡ್ ಟ್ರಂಪ್ ಸರ್ಕಾರದ ಹಲವು ನೀತಿಗಳನ್ನು ರದ್ದುಪಡಿಸಿದ್ದಾರೆ. ಸುಮಾರು 17 ನೀತಿಗಳನ್ನು ಅವರ ರದ್ದುಪಡಿಸುವ ಮೂಲಕ ಹೊಸ ನಿಯಮಗಳನ್ನು ಜಾರಿಗೊಳಿಸಿದ್ದಾರೆ.
ಅವುಗಳಲ್ಲಿ ಒಂದು 'ಮುಸ್ಲೀಮರ ಪ್ರಯಾಣ ನಿಷೇಧ ನೀತಿ'. 2017ರಲ್ಲಿ ಟ್ರಂಪ್ ಸರ್ಕಾರ ಈ ನೀತಿಯನ್ನು ಜಾರಿಗೊಳಿಸಿತ್ತು. ಕೆಲವು ಮುಸ್ಲಿಂ ರಾಷ್ಟ್ರಗಳ ನಾಗರಿಕರಿಗೆ ಅಮೆರಿಕ ಪ್ರವೇಶವನ್ನು ನಿರ್ಬಂಧಿಸಿ ಹೊರಡಿಸಿದ್ದ ಆದೇಶ ಇದಾಗಿದೆ.
ಡೊನಾಲ್ಡ್ ಟ್ರಂಪ್ ಹೊರಡಿಸಿದ್ದ ಈ ಆದೇಶವನ್ನು ಜೋ ಬೈಡೆನ್ ತೆರವುಗೊಳಿಸಿದ್ದಾರೆ. ಇದರಿಂದಾಗಿ ಜಗತ್ತಿನ ಎಲ್ಲಾ ರಾಷ್ಟ್ರಗಳ ನಾಗರಿಕರಿಗೆ ಅಮೆರಿಕದಲ್ಲಿ ಮುಕ್ತ ಅವಕಾಶವಿದೆ ಎಂದು ಬೈಡೆನ್ ಹೇಳಿದ್ದಾರೆ.
ಟ್ರಂಪ್ ಸರ್ಕಾರದ ನೀತಿಯಿಂದ ತೊಂದರೆ ಅನುಭವಿಸಿದ ಪ್ರದೇಶದವರಿಗೆ ವೀಸಾ ನೀಡುವ ಪ್ರಕ್ರಿಯೆ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನುಳಿದಂತೆ ಪ್ಯಾರೀಸ್ ಹವಾಮಾನ ಒಪ್ಪಂದಕ್ಕೆ ಮರು ಸೇರ್ಪಡೆ, ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ (WHO)ಮರು ಹೊಂದಾಣಿಕೆ ಸೇರಿದಂತೆ ಇನ್ನೂ ಹಲವು ಕಾರ್ಯನೀತಿಗಳನ್ನು ಬೈಡೆನ್ ತಮ್ಮ ಅಧಿಕಾರಾವಧಿಯ ಮೊದಲ ದಿನವೇ ಘೋಷಿಸಿದ್ದಾರೆ.