‘ಅಮ್ಮಾ, ಸೀಮಂತಕ್ಕೆ ರೆಡಿ ಮಾಡು’ ಎಂದು ಕರೆ ಮಾಡಿದ್ದ ಮಗಳು ತವರು ಸೇರಿದ್ದು ಶವವಾಗಿ!

suicide
Published on

ಬಾಗಲಕೋಟೆ: ಮನೆಯಲ್ಲಂತೂ ಬಡತನ, ಗಂಡನ ಮನೆಯಲ್ಲಾದರೂ ಮಗಳು ಸುಖವಾಗಿರಲಿ ಎಂದು ಸಾಲ ಸೋಲ ಮಾಡಿ ಅದ್ಧೂರಿಯಿಂದ ಮದುವೆ ಮಾಡಿಕೊಟ್ಟಿದ್ದರು. ಮಗಳು ಗರ್ಭಿಣಿ ಎಂದಾಗ ಹೆತ್ತವರ ಖುಷಿಗೆ ಪಾರವೇ ಇರಲಿಲ್ಲ. ಮನೆಯಲ್ಲಿ ಸೀಮಂತಕ್ಕೆಂದು ಸಕಲ ಸಿದ್ಧತೆಯನ್ನೂ ನಡೆಸಲಾಗಿತ್ತು. ಆದರೆ ಈ ಹೆತ್ತವರಿಗೆ ಬಂದದ್ದು ಮಗಳು ಸತ್ತ ಸುದ್ದಿ!

ಇಂಥದ್ದೊಂದು ದುರಂತ ನಡೆದಿರುವುದು ಗದಗದಲ್ಲಿ. ಮದುವೆಯಾದಾಗ ಖುಷಿಯಾಗಿಯೇ ಇದ್ದ ನಿರ್ಮಲಾಗೆ ಅದೇನಾಯಿತೋ ಗೊತ್ತಿಲ್ಲ. ತುಂಬು ಗರ್ಭಿಣಿಯಾಗಿದ್ದ ಈಕೆ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಚಿಕ್ಕಕೊಡಲಗಿ ತಾಂಡಾ ನಿವಾಸಿಯಾದ ನಿರ್ಮಲಾಳನ್ನು ಗಜೇಂದ್ರಗಡ ಪಟ್ಟಣದ ಕಡ್ಡಿ ಪ್ಲಾಟ್ ನಿವಾಸಿಯಾದ ಲೋಕೇಶ್ ರಾಠೋಡ್‌ಗೆ ಮದುವೆ ಮಾಡಿಕೊಡಲಾಗಿತ್ತು. ಲೋಕೇಶ್‌ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.

ಇಬ್ಬರೂ ಅನ್ಯೋನ್ಯವಾಗಿಯೇ ಇದ್ದರು. ಈ ನಡುವೆ ನಿರ್ಮಲಾ ಗರ್ಭಿಣಿಯಾಗಿದ್ದು, ಆಕೆಯ ಸೀಮಂತ ಕಾರ್ಯಕ್ಕೆ ತವರಿನಲ್ಲಿ ಸಿದ್ಧತೆ ನಡೆಸಲಾಗಿತ್ತು. ನಿರ್ಮಲಾ ಕೂಡ ಖುಷಿಯಲ್ಲಿಯೇ ಇದ್ದರು. ತವರಿಗೆ ಬರುತ್ತಿದ್ದೇನೆ ಎಂದು ತಾಯಿಗೆ ಕರೆ ಮಾಡಿ ಹೇಳಿದ್ದರು. ಸೀಮಂತರ ಖುಷಿಯಲ್ಲಿಯೇ ಆಕೆ ಇದ್ದರು. ಆದರೆ ಇದ್ದಕ್ಕಿದ್ದಂತೆಯೇ ನಿರ್ಮಲಾ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಕೆಲವು ದಿನಗಳಿಂದ ಗಂಡ-ಹೆಂಡತಿ ನಡುವೆ ಬಿರುಕು ಉಂಟಾಗಿತ್ತು. ಇಬ್ಬರೂ ಜಗಳ ಮಾಡುತ್ತಿದ್ದರು. ಈ ವಿಷಯವನ್ನು ನಿರ್ಮಲಾ ತನ್ನ ಅಣ್ಣನಿಗೆ ಹೇಳಿದ್ದರು ಎನ್ನಲಾಗುತ್ತಿದೆ. ಆದರೆ ಇದು ಆತ್ಮಹತ್ಯೆಯೋ, ಕೊಲೆಯೋ ಅಥವಾ ಇನ್ನೇನೋ ಎಂಬ ಬಗ್ಗೆ ಪೊಲೀಸರಿಗೆ ಸಂದೇಹ ಉಂಟಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net