

ಬಲ್ಗೇರಿಯಾ: ಕರೊನಾ, ಸುನಾಮಿ, ಪ್ರಳಯ, ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲದಂಥ ಮಹಾನ್ ಭವಿಷ್ಯವನ್ನು ನೂರಾರು ವರ್ಷಗಳ ಹಿಂದೆಯೇ ಬರೆದಿಟ್ಟಿದ್ದ ಜಗತ್ಪ್ರಸಿದ್ಧ ಕಾಲಜ್ಞಾನಿ ಬಾಬಾ ವಾಂಗಾ ಅವರು ಇಲ್ಲಿಯವರೆಗೆ ನುಡಿದಿರುವ ಬಹುತೇಕ ಭವಿಷ್ಯಗಳು ನಿಜವಾಗಿವೆ. ಅದರಲ್ಲಿಯೂ ರಾಜಕಾರಣ ಮತ್ತು ಅನಾಹುತಗಳ ಕುರಿತಾಗಿ ಇವರು ಬರೆದಿಟ್ಟಿರುವ ಭವಿಷ್ಯದ ನುಡಿಗಳಂತೆ ಜಗತ್ತಿನಲ್ಲಿ ಘಟನೆಗಳು ಸಂಭವಿಸುತ್ತಿವೆ ಎನ್ನಲಾಗಿದೆ.
ಬಲ್ಗೇರಿಯಾ ಮೂಲದ ಬಾಬಾ ವಾಂಗಾ 12ನೇ ವರ್ಷಕ್ಕೆ ದೃಷ್ಟಿ ಕಳೆದುಕೊಂಡಿದ್ದರು. ಬಿರುಗಾಳಿಯ ಸಮಯದಲ್ಲಿ ಧೂಳಿನ ಕಣಗಳು ಕಣ್ಣಿಗೆ ಬಡಿದ ಕಾರಣ, ದೃಷ್ಟಿ ಹೋಗಿತ್ತು. ಆಗಿನಿಂದ ದೇವರು ತನಗೆ ದಿವ್ಯದೃಷ್ಟಿ ನೀಡಿದ ಎನ್ನುವ ಅವರಿಗೆ ಎಲ್ಲ ವರ್ಷದ ಭವಿಷ್ಯ ಕಾಣಸಿಗುತ್ತಿತ್ತಂತೆ. ಈಕೆ ಆಧುನಿಕ ನಾಸ್ಟ್ರಡಾಮಸ್ ಎಂದೇ ಹೆಸರಾಗಿದ್ದಾರೆ. 9/11 ದಾಳಿ, ಬ್ರೆಕ್ಸಿಟ್ ಭವಿಷ್ಯ, ಥೈಲ್ಯಾಂಡ್ ಸುನಾಮಿ, ಒಬಾಮಾ ಅಧ್ಯಕ್ಷ ಪದವಿ, ಸೋವಿಯತ್ ಒಕ್ಕೂಟ ಪತನ, ಪ್ರಿನ್ಸ್ ಡಯಾನಾ ದುರಂತ ಅಂತ್ಯ, ಚರ್ನೋಬಿಲ್ ದುರಂತ... ಸೇರಿದಂತೆ 2019ರ ಹೊತ್ತಿಗೆ ಭೀಕರ ವೈರಸ್ ಇಡೀ ವಿಶ್ವವನ್ನು ಆವರಿಸಲಿದೆ ಎಂಬ ಬಗ್ಗೆಯೂ ಭವಿಷ್ಯ ನುಡಿದಿದ್ದರು.
1996ರಲ್ಲೇ ವಾಂಗಾ ಮೃತಪಟ್ಟಿದ್ದರೂ 5079ನೇ ಇಸವಿಯವರೆಗೆ ಆಕೆ ಭವಿಷ್ಯ ನುಡಿದಿದ್ದಾರೆ. 5079ರಲ್ಲಿ ಜಗತ್ತು ಕೊನೆಯಾಗುತ್ತದೆ ಎಂಬುದು ಆಕೆಯ ಮಾತು. ಇದೀಗ ಅವರು ನುಡಿದಿರುವ 2022ರ ಭವಿಷ್ಯ ವೈರಲ್ ಆಗಿದೆ.
ಇದರಲ್ಲಿ ಬಾಬಾ ವಾಂಗಾ ಭಾರತ ಸೇರಿದಂತೆ ಹೇಳಿದ್ದೇನು? ಇಲ್ಲಿವೆ ವಿವರ:
ಸೈಬೀರಿಯಾದಲ್ಲಿ ಇದುವರೆಗೂ ಹಿಮಗಟ್ಟಿದಂತಿದ್ದ ಹೊಸ ವೈರಸ್ ಸಂಶೋಧಕರಿಗೆ ಸಿಗಲಿದೆ. ತಾಪಮಾನ ಏರಿಕೆಯಿಂದ ಬಿಡುಗಡೆಯಾಗಲಿರುವ ಈ ವೈರಸ್, ನಿಯಂತ್ರಣ ತಪ್ಪಿ ಜಗತ್ತಿನಾದ್ಯಂತ ಹರಡಲಿದೆ ಎಂದಿದ್ದಾರೆ. ಇದನ್ನು ನಿಯಂತ್ರಿಸುವಲ್ಲಿ ವ್ಯವಸ್ಥೆ ವಿಫಲವಾಗಲಿದೆ ಎಂದು ಬಾಬಾ ವಾಂಗಾ 2022ರ ಬಗ್ಗೆ ನುಡಿದಿದ್ದಾರೆ.
ಭಾರತದಲ್ಲಿ ತಾಪಮಾನ 50 ಡಿಗ್ರಿಗೂ ಹೆಚ್ಚು ಏರಿಕೆಯಾಗಲಿದೆ. ಇದರಿಂದ ಬರಗಾಲ ಕಾಣಿಸಿಕೊಳ್ಳಲಿದೆ. ಪರಿಣಾಮವಾಗಿ ಭಾರತದಲ್ಲಿ ಮಿಡತೆ ದಾಳಿ ಹೆಚ್ಚಲಿದ್ದು, ಬೆಳೆಗಳ ಹಾನಿಯಿಂದ ರೈತರು ಕಂಗಾಲಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇದಾಗಲೇ ಕಳೆದ ವರ್ಷ ಮಿಡತೆಗಳು ರಾಜಸ್ಥಾನ, ಗುಜರಾತ್ ಹಾಗೂ ಮಧ್ಯ ಪ್ರದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವುದು ಎಲ್ಲರಿಗೂ ತಿಳಿದದ್ದೇ.
2022ರಲ್ಲಿ ಏಷ್ಯನ್ ದೇಶಗಳು ಹಾಗೂ ಆಸ್ಟ್ರೇಲಿಯಾ ಬಹಳಷ್ಟು ಬಾರಿ ಪ್ರವಾಹಕ್ಕೆ ನಲುಗುತ್ತವೆ. ಮತ್ತೆ ಮತ್ತೆ ಬರುವ ಪ್ರವಾಹಕ್ಕೆ ಚೇತರಿಸಿಕೊಳ್ಳಲು ಒದ್ದಾಡಬೇಕಾಗುತ್ತದೆ. ಬಹಳಷ್ಟು ಜನರ ಬದುಕು ಅಸ್ತವ್ಯಸ್ತವಾಗುತ್ತದೆ ಎಂಬ ಬಾಬಾ ವಾಂಗಾ ಹೇಳಿದ್ದಾರೆ.
ಏಲಿಯನ್‌ಗಳ ಬಗ್ಗೆ ಇನ್ನೂ ನಿಗೂಢವಾಗಿರುವ ಈ ಹೊತ್ತಿನಲ್ಲಿ ಬಾಬಾ ವಾಂಗಾ ಅನ್ಯಗ್ರಹ ಜೀವಿಗಳು ನಮ್ಮ ಮೇಲೆ 2002ರಲ್ಲಿ ದಾಳಿ ಮಾಡಲಿವೆ ಎಂದಿದ್ದಾರೆ. 2022ರಲ್ಲಿ ಔಮುಮ ಹೆಸರಿನ ಆಸ್ಟೆರಾಯ್ಡ್‌ನ್ನು ಅನ್ಯಗ್ರಹ ಜೀವಿಗಳು ಭೂಮಿಗೆ ಕಳಿಸಿ ಆಕ್ರಮಣ ನಡೆಸಲಿವೆ ಎನ್ನುವುದು ಅವರ ಭವಿಷ್ಯವಾಣಿ.
2022ರ ಹೊತ್ತಿಗೆ ವರ್ಚುಯಲ್ ರಿಯಾಲಿಟಿ ಮತ್ತಷ್ಟು ಹೆಚ್ಚಲಿದೆ. ಜನರು ತಮ್ಮ ಹೆಚ್ಚಿನ ಸಮಯವನ್ನು ಸ್ಕ್ರೀನ್ ಮುಂದೆಯೇ ಕಳೆಯಲಿದ್ದಾರೆ, ಇದೊಂದು ವ್ಯಸನವಾಗಿ ಬದಲಾಗಲಿದ್ದು, ಜನರು ಮಾನಸಿಕ ಸಮಸ್ಯೆಗಳಿಂದ ಬಳಲಿದ್ದಾರೆ ಎಂದು ಅವರು ಆಗಲೇ ಭವಿಷ್ಯ ನುಡಿದಿದ್ದಾರೆ.
ಇದನ್ನು ಹೊರತುಪಡಿಸಿದರೆ, ಜಗತ್ತಿನ ಪ್ರಮುಖ ನಗರಗಳು ಕುಡಿಯುವ ನೀರಿನ ಸಮಸ್ಯೆಯಿಂದ ಬಳಲಲಿವೆ, ನದಿಗಳು ಕಲುಷಿತವಾಗಿ ಬಳಸಲು ಅಯೋಗ್ಯವಾಗುವುದರಿಂದ ಅವನ್ನು ಶುದ್ಧೀಕರಿಸುವ ಕಾರ್ಯ ಮಾಡಬೇಕಿದೆ ಎಂದಿದ್ದಾರೆ. ಜಗತ್ತು ಸುನಾಮಿ, ಭೂಕಂಪಗಳಿಂದ ನಲುಗಲಿದೆ. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಇಂಡೋನೇಷ್ಯಾ, ಹಾಗೂ ಭಾರತದ ತೀರ ಪ್ರದೇಶಗಳ ಮೇಲೆ ಪರಿಣಾಮ ಬೀರಲಿವೆ ಎಂದಿದ್ದಾರೆ.