

ನವದೆಹಲಿ: ಕರೊನಾ ವೈರಸ್ ಸೋಂಕು ಹಾಗೂ ಕೆಲವು ಅನಾರೋಗ್ಯ ಸಮಸ್ಯೆಯಿಂದಾಗಿ ನಿನ್ನೆ ಮೃತಪಟ್ಟಿರುವ ಮಾಜಿ ರಾಷ್ಟ್ರಪತಿ, ಭಾರತರತ್ನ ಪ್ರಣಬ್ ಮುಖರ್ಜಿ ಅವರು ಪಂಚಭೂತಗಳಲ್ಲಿ ಲೀನರಾದರು.
ಅವರ ಪುತ್ರ ಅಭಿಜಿತ್ ಮುಖರ್ಜಿಯವರು ತಂದೆಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.
ದೆಹಲಿಯ ಲೋಧಿ ರಸ್ತೆಯ ಚಿತಾಗಾರದಲ್ಲಿ ಸಕಲ ಸರ್ಕಾರಿ ಮರ್ಯಾದೆಯೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಕರೊನಾ ವೈರಸ್ ಹಿನ್ನೆಲೆಯಲ್ಲಿ ಅವರ ಪಾರ್ಥೀವ ಶರೀರವನ್ನು ವ್ಯಾನ್ ಮೂಲಕ ಕರೆತರಲಾಗಿತ್ತು.
ಈ ಸಂದರ್ಭದಲ್ಲಿ ಅಂತಿಮ ದರ್ಶನಕ್ಕೆ ಬಂದಿದ್ದ ಜನರು ಕರೊನಾ ವೈರಸ್ ನಿಯಮದಂತೆ ಆರು ಅಡಿಗಳಷ್ಟು ಅಂತರ ಕಾಯ್ದುಕೊಂಡು ‘ಭಾರತರತ್ನ’ನಿಗೆ ಅಂತಿಮ ನಮನ ಸಲ್ಲಿಸಿದರು.