

ನವದೆಹಲಿ: ಮಾಜಿ ರಾಷ್ಟ್ರಪತಿ, ಭಾರತರತ್ನ ಪ್ರಣಬ್ ಮುಖರ್ಜಿ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 2 ಗಂಟೆಗೆ ದೆಹಲಿಯ ಲೋಧಿ ರಸ್ತೆಯ ಶವಾಗಾರದಲ್ಲಿ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಅವರ ಪಾರ್ಥೀವ ಶರೀರವನ್ನು ಶವಾಗಾರಕ್ಕೆ ತರಲಾಗಿದ್ದು, ಅಂತಿಮ ವಿಧಿ ವಿಧಾನಗಳು ನಡೆಯುತ್ತಿವೆ.
ಈ ಸಂದರ್ಭದಲ್ಲಿ ಅಂತಿಮ ದರ್ಶನಕ್ಕೆ ಬಂದಿದ್ದ ಜನರು ಕರೊನಾ ವೈರಸ್ ನಿಯಮದಂತೆ ಮಾಸ್ಕ್ ಧರಿಸಿ, ಆರು ಅಡಿಗಳಷ್ಟು ಅಂತರ ಕಾಯ್ದುಕೊಂಡು ‘ಭಾರತರತ್ನ’ನಿಗೆ ಅಂತಿಮ ನಮನ ಸಲ್ಲಿಸಿದರು.
ನವದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಾಗಿದ್ದ ಪ್ರಣಬ್ ಮುಖರ್ಜಿ ಅವರು ಮೆದುಳು ಶಸ್ತ್ರಚಿಕಿತ್ಸೆ ನಂತರವೂ ಚೇತರಿಸಿಕೊಂಡಿರಲಿಲ್ಲ. ಆರೋಗ್ಯ ಸಮಸ್ಯೆಗಳು ಉಂಟಾಗಿದ್ದರಿಂದ ಕೋಮಾಗೆ ಜಾರಿದ್ದ ಅವರು ನಿನ್ನೆ ಸಂಜೆ ನಿಧನರಾಗಿದ್ದಾರೆ.
ಈ ನಡುವೆ, ಚೀನಾದ ವಿದೇಶಾಂಗ ವಕ್ತಾರ ಟ್ವೀಟ್ ಮಾಡಿ, ಪ್ರಣಬ್ ಮುಖರ್ಜಿ ಭಾರತದ ಹಿರಿಯ ರಾಜಕಾರಣಿ. ರಾಜಕೀಯದಲ್ಲಿ ತಮ್ಮ 50 ವರ್ಷಗಳಲ್ಲಿ ಅವರು ಚೀನಾ-ಭಾರತ ಸಂಬಂಧಗಳಿಗೆ ಸಕಾರಾತ್ಮಕ ಕೊಡುಗೆ ನೀಡಿದ್ದಾರೆ. ಇದು ಚೀನಾ-ಭಾರತ ಸ್ನೇಹ ಮತ್ತು ಭಾರತಕ್ಕೆ ಭಾರಿ ನಷ್ಟವಾಗಿದೆ. ಅವರ ನಿಧನಕ್ಕೆ ನಾವು ಸಂತಾಪ ಸೂಚಿಸುತ್ತೇವೆ ಮತ್ತು ಸಹಾನುಭೂತಿ ವ್ಯಕ್ತಪಡಿಸುತ್ತೇವೆ ಎಂದಿದ್ದಾರೆ.