

ಬೆಂಗಳೂರು: ಇದೀಗ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಎಲ್ಲೆಡೆ ದಾಳಿ ನಡೆಸುತ್ತಿರುವ ಬೆನ್ನಲ್ಲೇ, ಇದನ್ನೇ ಬಂಡವಾಳ ಮಾಡಿಕೊಂಡ ಪ್ರಸಿದ್ಧ ನಿರ್ಮಾಪಕನೊಬ್ಬ ತಾನೂ ಐಟಿ ಅಧಿಕಾರಿ ಎಂದು ಹೇಳಿಕೊಂಡು ಸಿನಿಮೀಯ ರೀತಿಯಲ್ಲಿ ಉದ್ಯಮಿಯ ಅಪಹರಣ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ.
‘ಹಾಫ್ ಮೆಂಟಲ್’ ಸೇರಿದಂತೆ ಕೆಲ ಚಿತ್ರ ನಿರ್ಮಿಸಿ ಲಾಸ್ ಅನುಭವಿಸಿದ್ದ ನಿರ್ಮಾಪಕ ಶಶಿಕುಮಾರ್ ಸದ್ಯ ಪೊಲೀಸರ ಅತಿಥಿ! 2015ರಲ್ಲಿ ಹಾಫ್ ಮೆಂಟಲ್ ಚಿತ್ರ ನಿರ್ಮಿಸಿ ಕೈಸುಟ್ಟುಕೊಂಡಿದ್ದ ಶಶಿಕುಮಾರ್ ಅವರಿಗೆ ಸಾಲಗಾರರ ಕಾಟ ಹೆಚ್ಚಾಗಿತ್ತು. ಅದ್ದರಿಂದ ದುಡ್ಡು ಮಾಡಬೇಕು ಎಂಬ ಉದ್ದೇಶದಿಂದ ಸಿನಿಮೀಯ ಸ್ಟೈಲ್ನಲ್ಲಿ ಈರುಳ್ಳಿ ವ್ಯಾಪಾರಿ ಶ್ರೀನಿವಾಸನ್ ಎಂಬ ಶ್ರೀಮಂತ ವ್ಯಾಪಾರಿಯ ಅಪಹರಣದ ಸ್ಕೆಚ್ ಹಾಕಿದ್ದಾರೆ. ನಂತರ ವಾರಗಟ್ಟಲೆ ಕೂತ ಈ ಬಗ್ಗೆ ಯೋಚಿಸಿದ್ದಾರೆ.
ಶ್ರೀನಿವಾಸನ್ ಬಳಿ ಕೋಟ್ಯಂತರ ರೂಪಾಯಿ ದುಡ್ಡು ಇರುವುದು ಗೊತ್ತಾಗಿ, ತಮ್ಮ ಸ್ಕೆಚ್ನಂತೆ ಪ್ರಕ್ರಿಯೆ ಶುರು ಮಾಡಿದ್ದಾರೆ. ಐಟಿ ಅಧಿಕಾರಿಗಳಂತೆ ವೇಷಭೂಷಣ ತೊಟ್ಟಿದ್ದಾರೆ. ಅದರಂತೆ ಸೆಪ್ಟೆಂಬರ್ 30 ರಂದು ಶ್ರೀನಿವಾಸನ್ ಅವರ ಕಾರನ್ನು ಅಡ್ಡಗಟ್ಟಿದ ಇವರು, ಅವರನ್ನು ಅಪಹರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿ ಅವರನ್ನು ಕೆಳಕ್ಕೆ ಇಳಿಸಿ, ‘ನಿಮ್ಮ ಬಗ್ಗೆ ತೆರಿಗೆ ವಂಚನೆ ದೂರುಗಳು ಬಂದಿವೆ. ಒಂದೂವರೆ ಕೋಟಿ ಟ್ಯಾಕ್ಸ್ ವಂಚನೆ ಮಾಡಿರುವ ಬಗ್ಗೆ ನಮ್ಮಲ್ಲಿ ಸಾಕ್ಷ್ಯಾಧಾರಗಳು ಇವೆ. 50 ಲಕ್ಷ ರೂ. ಹಣ ನೀಡದೇ ಇದ್ದರೆ, ಕೇಸ್ ಹಾಕಿ ಒಳಗೆ ಹಾಕುತ್ತೇವೆ’ ಎಂದಿದ್ದಾರೆ.
ಕೊನೆಗೆ ಇಪ್ಪತ್ತು ಲಕ್ಷಕ್ಕೆ ಡೀಲ್ ಮಾಡಿಕೊಂಡು ಕಳುಹಿಸಿದ್ದಾರೆ. ಮಾರನೆಯ ದಿನ ಮತ್ತೆ ಐದು ಲಕ್ಷ ರೂ. ಕೊಡುವಂತೆ ಹೇಳಿದ್ದಾರೆ. ಇವರ ಬಗ್ಗೆ ಸಂದೇಹ ವ್ಯಕ್ತಪಡಿಸಿದ ಶ್ರೀನಿವಾಸನ್ ಅವರು ಪೊಲೀಸರಿಗೆ ಕೂಡಲೇ ದೂರು ನೀಡಿದ್ದಾರೆ. ಇದರ ಬೆನ್ನಟ್ಟಿ ಹೋಗಿರುವ ಪೊಲೀಸರು ಶಶಿಕುಮಾರ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.