ಪ್ರಧಾನಿ ಮೋದಿಯ ತಮ್ಮ ಎಂದು ಕಂಡಕಂಡವರ ಬಳಿ ದುಡ್ಡು ವಸೂಲಿ ಮಾಡುತ್ತಿದ್ದವ ಅರೆಸ್ಟ್​!

modi
Published on

ಸುಲ್ತಾನಪುರ (ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ತಾನು ಎಂದು ಹೇಳಿಕೊಂಡು ಕಂಡಕಂಡವರ ಬಳಿ ಹಣ ವಸೂಲಿಗೆ ಇಳಿದಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ನರೇಂದ್ರ ಮೋದಿ ಅವರ ಸಹೋದರ ಪ್ರಲ್ಹಾದ್ ಮೋದಿ ಹೆಸರಿನಲ್ಲಿ ಈತ ಹಣ ಸಂಗ್ರಹಿಸುತ್ತಿದ್ದ. ಜಿತೇಂದ್ರ ತಿವಾರಿ ಅಲಿಯಾಸ್‌ ಜೀತು ಎಂಬಾತ ಇಂಥದ್ದೊಂದು ಕೃತ್ಯ ಮಾಡುತ್ತಿದ್ದ.

ಈ ಕುರಿತು ಕೆಲವರು ಪ್ರಧಾನ ಮಂತ್ರಿ ಕಚೇರಿಗೆ ಮಾಹಿತಿ ನೀಡಿದ್ದರು. ಪ್ರಧಾನ ಮಂತ್ರಿ ಕಾರ್ಯಾಲಯದ ಆದೇಶದ ಮೇರೆಗೆ ತನಿಖೆ ಕೈಗೊಂಡಿದ್ದ ಉತ್ತರಪ್ರದೇಶ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದರು. ಕೊನೆಗೆ ತಿವಾರಿಯನ್ನು ವಿಕಾಸ್‌ ಭವನದ ಬಳಿ ಸುಳಿದಾಡುತ್ತಿದ್ದ ಈತನನ್ನು ಬಂಧಿಸಲಾಗಿದೆ ಎಂದು ಠಾಣಾಧಿಕಾರಿ ಭೂಪೇಂದ್ರ ಸಿಂಗ್ ಹೇಳಿದ್ದಾರೆ.

'ಗುಜರಾತ್‌ನ ಮಾಧವ್‌ಪುರದಲ್ಲಿ ಜನವರಿ 4 ರಂದು ಪ್ರಧಾನಿ ಸಹೋದರ ಪ್ರಹ್ಲಾದ್‌ ಮೋದಿ ಪ್ರಸ್ತಾಪಿಸಿದ ಕಾರ್ಯಕ್ರಮವೊಂದರ ಪೋಸ್ಟರ್‌ ಅನ್ನು ತಿವಾರಿ ತನ್ನ ಕಾರಿನಲ್ಲಿ ಅಂಟಿಸಿಕೊಂಡಿದ್ದನು' ಎಂದು ಪೊಲೀಸರು ಮಾಹಿತಿ ನೀಡಿದರು. ಈ ವಿಚಾರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದಾಗಲೇ ಈತ ಅನೇಕ ಮಂದಿಯಲ್ಲಿ ಹಣ ವಸೂಲಿ ಮಾಡಿರುವ ಸಾಧ್ಯತೆ ಇದ್ದು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ವಿವರಣೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net