ಯಾರಿಗೆ ವಯಸ್ಸಾಗಿರತ್ತೋ ಅವ್ರು ಸಾಯ್ಲೇಬೇಕಲ್ಲಾ? ಕರೊನಾದಿಂದ ಸತ್ರೆ ಏನ್​ ಮಾಡೋಕಾಗತ್ತೆ ಎಂದ ಸಚಿವ

patil
Published on

ಭೋಪಾಲ್: ಕರೊನಾದಿಂದ ಕ್ಷಣ ಕ್ಷಣಕ್ಕೂ ಆತಂಕ ಸೃಷ್ಟಿಯಾಗಿರುವ ಬೆನ್ನಲ್ಲೇ ಇದೀಗ ಇದರ ಕುರಿತಂತೆ ಹೇಳಿಕೆಯೊಂದನ್ನು ನೀಡಿರುವ ಮಧ್ಯಪ್ರದೇಶದ ಸಚಿವ ಪ್ರೇಮ್ ಸಿಂಗ್ ಪಾಟೀಲ್ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಮಧ್ಯಪ್ರದೇಶದಲ್ಲಿ ಕೂಡ ಕರೊನಾ ಹಾಟ್​ಸ್ಪಾಟ್​ ಆಗಿದ್ದು, ಸಾವಿನ ಸಂಖ್ಯೆ ಮಿತಿಮೀರುತ್ತಿದೆ. ಈ ಬಗ್ಗೆ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿರುವ ಪಾಟೀಲ್​, ಕರೊನಾದಿಂದಾಗಿ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಯಾರು ಕೂಡ ಇದನ್ನು ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆದರೆ ಅದಕ್ಕೆ ಒಂದು ವಾಕ್ಯ ಸೇರಿಸಿದ ಅವರು, ಯಾರಿಗೆ ವಯಸ್ಸಾಗಿರುತ್ತೋ ಅವರು ಸಾಯ್ತರೆ ಬಿಡಿ, ಏನು ಮಾಡೋಕಾಗತ್ತೆ ಎಂದು ಹೇಳಿ ಇದೀಗ ವಿವಾದಕ್ಕೆ ಗುರಿಯಾಗಿದ್ದಾರೆ.

ಕರೊನಾದ ಕುರಿತು ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆಯಾಗಿದೆ. ಜನರು ಎಚ್ಚರಿಕೆಯಿಂದ ಇರಬೇಕು. ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು. ಆದರೆ ಇವರು ಹೇಳಿರುವ ಆ ಒಂದು ಮಾತು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಕರೊನಾ ಸೋಂಕಿತರಿಗೆ ಧೈರ್ಯ ತುಂಬಬೇಕಾಗಿರುವ ಸಚಿವರಿಂದಲೇ ಈ ರೀತಿ ಮನೋಬಲ ಕುಗ್ಗಿಸೋ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಕಮೆಂಟಿಗರು ಆಕ್ರೋಶ ವ್ಯಕ್ತಪಡಿಸಿತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net