ಒಂದೇ ತಿಂಗಳಲ್ಲಿ ಒಬ್ಬಳನ್ನೇ 4 ಬಾರಿ ಮದ್ವೆಯಾದ- ಐದನೇ ಬಾರಿಗೆ ಸಿಕ್ಕಿಬಿದ್ದ! ಕಾರಣ ಕೇಳಿದ್ರೆ ಸುಸ್ತಾಗ್ತೀರಾ!

thaiwan
ಸಾಂಕೇತಿಕ ಚಿತ್ರ
Published on

ತೈವಾನ್: ಇಲ್ಲೊಬ್ಬ ಭೂಪ ತನ್ನ ಪತ್ನಿಗೆ ಮೂರು ಬಾರಿ ವಿಚ್ಛೇದನ ಕೊಟ್ಟು ನಾಲ್ಕು ಬಾರಿ ಅವಳನ್ನೇ ಮದುವೆಯಾದ ವಿಚಿತ್ರ ಘಟನೆ ತೈವಾನ್​ನಲ್ಲಿ ನಡೆದಿದೆ.

ತೈವಾನ್‌ನ ತೇಪಿ ಬ್ಯಾಂಕ್‌ವೊಂದರಲ್ಲಿ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿ ಇಂಥದ್ದೊಂದು ವಿಚಿತ್ರ ಕೇಸ್​ನಲ್ಲಿ ಸಿಲುಕಿಕೊಂಡು, ಹೀಗೆ ಪದೇ ಪದೇ ಮದುವೆಯಾದ ತಪ್ಪಿಗೆ 20 ಸಾವಿರ ಡಾಲರ್​ ದಂಡ ಹಾಕಿಸಿಕೊಂಡಿದ್ದಾನೆ.

ಅಷ್ಟಕ್ಕೂ ಈತ ಹೀಗೆ ಮಾಡಲು ಕಾರಣ ಬ್ಯಾಂಕ್​ನಿಂದ ರಜೆ ಪಡೆಯಲು! ರಜೆಗೂ ಪದೇ ಪದೇ ಮದುವೆಯಾಗುವುದಕ್ಕೂ ಏನು ಸಂಬಂಧ ಎಂದು ಕೇಳುವಿರಾ? ತೈವಾನ್​ನಲ್ಲಿ ಬ್ಯಾಂಕ್​ ಸಿಬ್ಬಂದಿಗೆ ಮದುವೆಗೆಂದು ಎಂಟು ದಿನಗಳ ರಜೆ ಸಿಗುತ್ತದೆ. ಈ ಸಮಯದಲ್ಲಿ ತೆಗೆದುಕೊಳ್ಳುವ ರಜೆಗೆ ಯಾವುದೇ ರೀತಿಯಲ್ಲಿ ಸಂಬಳ ಕಟ್​ ಆಗುವುದಿಲ್ಲ. ಆದ್ದರಿಂದ ಹೀಗೆ ಮಾಡಿದ್ದಾನೆ .

ಈತ ಮೊದಲ ಬಾರಿ ಮದುವೆಯಾಗಿ ಎಂಟು ದಿನ ರಜೆ ಪಡೆದುಕೊಂಡ. ಆದರೆ ಅವನಿಗೆ ಮತ್ತಷ್ಟು ರಜೆ ಬೇಕಿತ್ತು. ಆದ್ದರಿಂದ ಪತ್ನಿಗೆ ಡಿವೋರ್ಸ್​ ಕೊಟ್ಟು ಪುನಃ ಮದುವೆಯಾಗಿ ಎಂಟು ದಿನ ರಜೆ ಪಡೆದ. ಹೀಗೆ ಮೂರು ಬಾರಿ ಅವಳಿಗೆ ಡಿವೋರ್ಸ್​ ಕೊಟ್ಟು ನಾಲ್ಕು ಬಾರಿ ಮದುವೆಯಾಗಿ 32 ದಿನ ರಜೆ ಪಡೆಯುವಲ್ಲಿ ಯಶಸ್ವಿಯಾದ!

ಈತ ಮೊದಲು ಮದುವೆಯಾಗಿದ್ದು ಕಳೆದ ವರ್ಷ ಏಪ್ರಿಲ್​ 6 ರಂದು. 8 ದಿನಗಳ ರಜೆ ಮುಗಿಯುತ್ತಿದ್ದಂತೆ, ತನ್ನ ಪತ್ನಿಗೆ ಡಿವೋರ್ಸ್ ನೀಡಿ ಮರು ಮದುವೆಯಾಗಿ ಮತ್ತೆ 8 ದಿನಗಳ ರಜೆ ಪಡೆದುಕೊಂಡಿದ್ದಾನೆ. ಹೀಗೆ ಅದೇ ಪತ್ನಿಗೆ ಮೂರು ಬಾರಿ ವಿಚ್ಛೇದನ ನೀಡಿ, ನಾಲ್ಕು ಬಾರಿ ಮದುವೆಯಾಗಿದ್ದಾನೆ.

ಐದನೇ ಬಾರಿ ಇದನ್ನು ಮುಂದುವರಿಸಲು ಯೋಚಿಸಿದ್ದ. ಆದರೆ ಬ್ಯಾಂಕ್​ ಮ್ಯಾನೇಜರ್​ಗೆ ಸಂದೇಹ ಬಂದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅವರು ರಜೆ ನೀಡಲು ನಿರಾಕರಿಸಿದಾದ ಬ್ಯಾಂಕ್ ವಿರುದ್ದವೇ ಕೇಸ್ ಹಾಕಿದ!

ಕಾರ್ಮಿಕ ಇಲಾಖೆ ಇದರ ವಿಚಾರಣೆ ನಡೆಸಿದಾಗ ಈತ ಮಾಡಿರುವ ಮೋಸದಾಟ ಬೆಳಕಿಗೆ ಬಂದು 20 ಸಾವಿರ ಡಾಲರ್​ ದಂಡ ವಿಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net