ಹುಟ್ಟುತ್ತಲೇ ದತ್ತುಪುತ್ರನಾದ ಮಗು: ಲವ್‌ ಸ್ಟೋರಿಗೆ ಟರ್ನಿಂಗ್‌ ಪಾಯಿಂಟ್‌- ಹೆತ್ತವರ ಮದುವೆ ಮಾಡಿಸಿದ ಕಂದಮ್ಮ

child1
Published on

ತಿರುವನಂತಪುರ: ಅದು 2020ರ ಅಕ್ಟೋಬರ್ 19. ಕೇರಳದ ಅವಿವಾಹಿತೆಯಾಗಿದ್ದ ಅನುಪಮಾ ಮುದ್ದು ಗಂಡುಮಗುವಿಗೆ ಜನ್ಮ ನೀಡಿದ್ದರು. ಇವರು ಅಜಿತ್‌ ಎಂಬುವವರನ್ನು ಪ್ರೀತಿಸಿದ್ದ ಫಲವಾಗಿ ಈ ಮಗು ಜನಿಸಿತ್ತು. ಇಬ್ಬರೂ ಮದುವೆಯಾಗುವ ಯೋಚನೆಯಲ್ಲಿ ಇದ್ದರು. ಆದರೆ ಇದು ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಅನುಪಮಾ ಅವರಿಗೆ ಅಕ್ಕ ಇದ್ದು, ಆಕೆಯ ಮದುವೆಯಾಗದ ಹಿನ್ನೆಲೆಯಲ್ಲಿ, ಆಕೆಯ ಮದುವೆಯಾಗುವವರೆಗೂ ತಂಗಿಯ ಮದುವೆ ಮಾಡುವುದಿಲ್ಲ ಎನ್ನುವುದು ಪಾಲಕರ ಹಠವಾಗಿತ್ತು.

ಈ ನಡುವೆಯೇ ಅನುಪಮಾ ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗು ಹುಟ್ಟುತ್ತಲೇ ಆಕೆಯ ಅರಿವಿಗೆ ಬಾರದಂತೆ ಅಪ್ಪ- ಅಮ್ಮ ಮಗುವನ್ನು ದತ್ತು ನೀಡಿಬಿಟ್ಟಿದ್ದರು. ಕೇರಳದ ದತ್ತುಕೇಂದ್ರದ ಮೂಲಕ ಈ ದತ್ತು ಪ್ರಕ್ರಿಯೆ ನಡೆದಿತ್ತು. ಮಗು ಹುಟ್ಟುತ್ತಲೇ ಅದನ್ನು ಯಾರೋ ಅಪಹರಿಸಿಬಿಟ್ಟಿರು ಎಂದು ಅನುಪಮಾ ಅವರಿಗೆ ಅವರ ತಾಯಿ ತಿಳಿಸಿದ್ದರು.

ಈ ಮಗುವನ್ನು ಆಂಧ್ರಪ್ರದೇಶದ ದಂಪತಿ ಪಡೆದುಕೊಂಡಿದ್ದರು. ತಾಯಿಯ ಮಾತಿನ ಮೇಲೆ ಅನುಪಮಾ ಮತ್ತು ಅಜಿತ್‌ ಅವರಿಗೆ ನಂಬಿಕೆ ಬಂದಿರಲಿಲ್ಲ. ಅವರು ತನಿಖೆ ನಡೆಸಿದಾಗ ಮಗುವನ್ನು ದತ್ತುಕೇಂದ್ರದ ಮೂಲಕ ದತ್ತುಕೊಟ್ಟಿದ್ದು ತಿಳಿದುಬಂತು. ಇದಾಗುವ ಹೊತ್ತಿಗೆ ಕೆಲವು ತಿಂಗಳುಗಳೇ ಕಳೆದಿದ್ದವು. ಸುಮ್ಮನೇ ಕುಳಿತುಕೊಳ್ಳದ ಅನುಪಮಾ ಹಲವು ದಿನಗಳವರೆಗೆ ದತ್ತು ಕೇಂದ್ರದ ಮುಂದೆ ಧರಣಿ ಕುಳಿತುಬಿಟ್ಟರು. ಈ ವಿಷಯ ಮಕ್ಕಳ ಕಲ್ಯಾಣ ಆಯೋಗಕ್ಕೂ ಹೋಯಿತು.

ಅಲ್ಲಿ ವಿಚಾರಣೆ ನಡೆದು ಮಗುವನ್ನು ಮರಳಿ ರಾಜ್ಯಕ್ಕೆ ಕರೆತರಲು ದತ್ತುಕೇಂದ್ರಕ್ಕೆ ಆಯೋಗ ನಿರ್ದೇಶನ ನೀಡಿತ್ತು. ನಂತರ ಅಧಿಕಾರಿಗಳು ಆಂಧ್ರಪ್ರದೇಶಕ್ಕೆ ತೆರಳಿ ಮಗುವನ್ನು ವಾಪಸ್‌ ತಂದಿದ್ದಾರೆ. ನಂತರ ಆ ಮಗು ಇವರದ್ದೇ ಹೌದೋ ಅಲ್ಲವೋ ಎಂಬುದಕ್ಕೆ ಡಿಎನ್‌ಎ ಪರೀಕ್ಷೆಯನ್ನೂ ನಡೆಸಲಾಯಿಗಿದೆ. ಮಗು ಈ ಜೋಡಿಯದ್ದೇ ಎಂದು ತಿಳಿದುಬಂದಿದ್ದರಿಂದ ಮಗುವನ್ನು ಅಮ್ಮನ ಕೈಗೆ ನೀಡಲಾಗಿದೆ.

ಇವಿಷ್ಟೂ ಈ ಜೋಡಿಯ ಕಥೆ. ಇದೀಗ ಇದಕ್ಕೊಂದು ಟರ್ನಿಂಗ್‌ ಪಾಯಿಂಟ್‌ ಸಿಕ್ಕಿದೆ. ಅದೇನೆಂದರೆ ಈ ಪುತ್ರ ಹೆತ್ತವರ ಮಡಿಲು ಸೇರಿ ಅವರ ಮದುವೆ ಮಾಡಿಸಿದ್ದಾನೆ. ಇಲ್ಲಿನ ಸ್ಥಳೀಯ ರಿಜಿಸ್ಟ್ರಾರ್ ಕಚೇರಿಯಲ್ಲಿ ಮಗುವಿನ ಸಮ್ಮುಖದಲ್ಲಿ ವಿವಾಹ ನಡೆದಿದೆ.

ದತ್ತು ವಿಷಯಕ್ಕೆ ಸಂಬಂಧಿಸಿದಂತೆ ಅನುಪಮಾ ಅವರು ಧರಣಿ ಕುಳಿತ ಹಿನ್ನೆಲೆಯಲ್ಲಿ ಈ ಸುದ್ದಿ ಕೇರಳಾದ್ಯಂತ ಭಾರಿ ಸಂಚಲವನ್ನೇ ಸೃಷ್ಟಿಸಿತ್ತು. ಕೊನೆಗೂ ಅಮ್ಮನ ಮಡಿಸಲು ಸೇರಿದ ಕಂದಮ್ಮ ಇದೀಗ ಅವರ ಮದುವೆಯನ್ನೂ ಮಾಡಿಸಿದ್ದಾನೆ.

ಅನುಪಮಾ ಸ್ಟುಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಮಾಜಿ ಕಾರ್ಯಕರ್ತೆಯಾಗಿದ್ದು, ಅಜಿತ್ ಸಿಪಿಐ(ಎಂ) ಯುವ ಘಟಕವಾದ ಡಿವೈಎಫ್‌ಐನ ಸ್ಥಳೀಯ ನಾಯಕರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net