VIDEO: ಎರಡನೆಯ ಪತ್ನಿಯನ್ನು ತೊರೆದು ಮಗಳ ವಯಸ್ಸಿನ ಯುವತಿಯನ್ನು ಮದುವೆಯಾದ ಸಂಸದ!

pak
Published on

ಇಸ್ಲಾಮಬಾದ್: ಸಂಸದರೊಬ್ಬರು ಎರಡನೆಯ ಪತ್ನಿಯನ್ನು ಬಿಟ್ಟು ಮೂರನೆಯ ಮದ್ವೆಯಾಗಿ ಈಗ ಭಾರಿ ಸುದ್ದಿಯಲ್ಲಿದ್ದಾರೆ. ಈ ಸುದ್ದಿಯಾಗಲು ಕಾರಣ, ಇವರು ಮೂರನೆಯ ಮದುವೆಯಾಗಿದ್ದಾರೆ ಎನ್ನುವುದಕ್ಕಲ್ಲ, ಬದಲಿಗೆ 50 ವರ್ಷದ ಈ ಸಂಸದ 18 ವರ್ಷದ ಯುವತಿ ಎಂದರೆ ತಮಗಿಂತ 32 ವರ್ಷ ಚಿಕ್ಕ ವಯಸ್ಸಿನಾಕೆಯನ್ನು ಮದುವೆಯಾಗಿದ್ದಾರೆ.

ಈ ಸಂಸದನ ಹೆಸರು ಅಮೀರ್ ಲಿಯಾಖತ್‌. ಪಾಕಿಸ್ತಾನದ ಆಡಳಿತಾರೂಢ ಪಾಕಿಸ್ತಾನ್-ತೆಹ್ರಿಕ್ –ಇ-ಇನ್ಸಾಫ್‌ ಪಕ್ಷದ ಸಂಸದ ಈತ. ಅಲ್ಲದೇ ಇವರು ಅಲ್ಲಿನ ಪ್ರಸಿದ್ಧ ಟಿವಿ ವಾಹಿನಿಯೊಂದರ ನಿರೂಪಕರೂ ಹೌದು.‌

ಇವರು ಮೂರನೆಯ ಮದುವೆಯಾಗಿರುವುದು ವಿಶೇಷವಲ್ಲ ಎನ್ನಲು ಕಾರಣ, ಇವರ ಧರ್ಮದಲ್ಲಿ ಹೀಗೆ ಮದುವೆಯಾಗಲು ಅವಕಾಶ ಇದೆ. ಆದ್ದರಿಂದ ಮೂರನೆಯ ಮದುವೆಯಾಗಿರುವುದು ಇವರ ಪ್ರಕಾರ ಕಾನೂನುಬದ್ಧವಾಗಿಯೇ ಇದೆ. ಆದರೆ ಇಂಥದ್ದೊಂದು ಉನ್ನತ ವೃತ್ತಿಯಲ್ಲಿರುವ ವ್ಯಕ್ತಿ ತಮ್ಮ ಮಗಳಿನ ವಯಸ್ಸಿನಾಕೆಯನ್ನು ಮದುವೆಯಾಗಿರುವ ಕಾರಣ, ಈ ಸುದ್ದಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

1 ತಿಂಗಳ ಹಿಂದಷ್ಟೇ 2ನೇ ಪತ್ನಿಯನ್ನು ಈ ಸಂಸದ ತೊರೆದಿದ್ದಾರೆ. ಈಗ ವಿವಾಹವಾಗಿರುವ ಯುವತಿಯ ಹೆಸರು ಸಯೀದಾ ದಾನಿಯಾ ಷಾ. ಈ ಕುರಿತು ಸಂಸದ ಖುದ್ದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. “ನಾನು ಈಗಷ್ಟೇ ಒಂದು ಭಯಾನಕ, ಕರಾಳ ದಿನಗಳಿಂದ ಆಚೆ ಬಂದಿದ್ದೇನೆ. ನನ್ನ ಜೀವನಕ್ಕೆ ಈಗ ದೊಡ್ಡ ತಿರುವು ಸಿಕ್ಕಿದೆ. ನಮ್ಮಿಬ್ಬರನ್ನು ನೀವೆಲ್ಲ ಆಶೀರ್ವದಿಸಬೇಕು’ ಎಂದು ಸಂಸದ ಅಮೀರ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಇತ್ತ ನವವಧು ಸಾಯೀದಾ ಷಾ ಕೂಡ ಸಾಮಾಜಿಕ ಜಾಲತಾಣದಲ್ಲಿ ಖುಷಿಯನ್ನು ಹಂಚಿಕೊಂಡಿದ್ದಾಳೆ. ‘ನಾನು ಬಾಲ್ಯದಲ್ಲೇ ಅಮೀರ್ ಅವರನ್ನು ಟಿವಿಯಲ್ಲಿ ನೋಡುತ್ತಿದ್ದೆ. ಆಗಲೇ ನನಗೆ ಪ್ರೀತಿ ಹುಟ್ಟಿತ್ತು. ಆದರೆ ಅವರು ಸಿಕ್ಕಿರಲಿಲ್ಲ. ಇದೀಗ ನನ್ನ ಬಾಲ್ಯದ ಪ್ರೇಮಿ ಸಿಕ್ಕಿದ್ದಾರೆ’ ಎಂದು ಹೇಳಿದ್ದಾಳೆ.

ಇನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಇವರಿಗೆ ಶುಭಕೋರಿದ್ದಾರೆ. ಆದರೆ ಜಾಲತಾಣದಲ್ಲಿ ಮಾತ್ರ ಇವರಿಬ್ಬರ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net