

ಕರಾಚಿ (ಪಾಕಿಸ್ತಾನ): ಪ್ರೀತಿ ಕುರುಡು, ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ಓಕೆ... ಹೀಗೆ ಪ್ರೀತಿಗೆ ಸಂಬಂಧಿಸಿದಂತೆ ಕೆಲವೊಂದು ಜನಪ್ರಿಯ ನಾಣ್ಣುಡಿಗಳಿವೆ. ಅಂಥದ್ದೇ ಒಂದು ಪ್ರೇಮದ ಕಥೆ ಈಗ ಭಾರಿ ಸುದ್ದಿಯಾಗಿದೆ. ಅದೇನೆಂದರೆ 18 ವರ್ಷದ ಯುವತಿಯೊಬ್ಬಳು 55 ವರ್ಷದ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿದ್ದಾಳೆ.
ಪಾಕಿಸ್ತಾನದ ಮುಸ್ಕಾನ್ ಮತ್ತು ಫಾರೂಕ್ ಕಥೆ ಈಗ ಭಾರಿ ಸುದ್ದಿಯಾಗಿದೆ. ಇದಕ್ಕೆ ಕಾರಣ, ಸಂಗೀತ ಪ್ರೇಮಿಗಳಾದ ಇಬ್ಬರೂ ಸಂಗೀತದಿಂದಲೇ ಒಂದಾಗಿರುವುದು. ಅದೂ ಮುಸ್ಕಾನ್ ಹಾಡಿದ ಒಂದೇ ಒಂದು ಗೀತೆಯಿಂದ ಫಾರೂಕ್ ಅವರು ಪ್ರೀತಿಗೆ ಬಿದ್ದುದು.
ನಟ ಬಾಬಿ ಡಿಯೋಲ್ ಅವರ ಸಿನಿಮಾ ಬಾದಲ್ ಸಿನಿಮಾದ 'ನಾ ಮಿಲೋ ಹಮ್ಸೆ ಜಾದಾ' (ನನ್ನನ್ನು ಹೆಚ್ಚಿಗೆ ಭೇಟಿಯಾಗಬೇಡ) ಎನ್ನುವ ಹಾಡು ಈ ಇಬ್ಬರನ್ನು ಪ್ರೀತಿಯಲ್ಲಿ ಬೀಳಿಸಿ ಈಗ ಇಬ್ಬರೂ ಮನೆಯವರ ವಿರೋಧದ ನಡುವೆಯೇ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.
ಇವರಿಬ್ಬರ ಮನೆಯೂ ಸಮೀಪದಲ್ಲಿಯೇ ಇದೆ. ಆದರೆ ವಯಸ್ಸಿನ ಅಂತರದಿಂದ ಇಬ್ಬರೂ ಅಷ್ಟಾಗಿ ಗಮನಿಸುತ್ತಿರಲಿಲ್ಲ. ಆದರೆ ಇವರ ನಡುವೆ ಒಂದೇ ಒಂದು ಸಾಮ್ಯತೆ ಎಂದರೆ ಇಬ್ಬರಿಗೂ ಸಂಗೀತ ಇಷ್ಟ; ದಿನವೂ ಮುಸ್ಕಾನ್ ಹಾಡು ಹಾಡುತ್ತಿದ್ದಳು. ಇದು ಪಕ್ಕದ ಮನೆಯ ಫಾರೂಕ್ ಅವರಿಗೆ ಕೇಳಿದೆ. ಅದರಲ್ಲಿಯೂ ಬಾದಲ್ ಚಿತ್ರದ ಹಾಡನ್ನು ಮುಸ್ಕಾನ್ ಪದೇ ಪದೇ ಹೇಳುತ್ತಿದ್ದಳು. ಇದರಿಂದ ಫಾರೂಕ್ ಮನಸೋತು ಹೋಗಿದ್ದಾರೆ. ಆಕೆಯ ಮೇಲೆ ಪ್ರೀತಿ ಉಕ್ಕಿದೆ.
ಇದಾದ ಮೇಲೆ ಫಾರೂಕ್ ಮುಸ್ಕಾನ್ ಮನೆಗೆ ಬಂದು ಆಕೆಯ ಗಾಯನವನ್ನು ಕೊಂಡಾಡಿದ್ದಾರೆ. ಅವರಿನ್ನೂ ಅವಿವಾಹಿತರಾಗಿದ್ದ ಹಿನ್ನೆಲೆಯಲ್ಲಿ ತಮ್ಮ ಪ್ರೇಮದ ಬಗ್ಗೆ ಮುಸ್ಕಾನ್ನಲ್ಲಿ ಹೇಳಿದ್ದಾರೆ. ಅವರೂ ಸಂಗೀತ ಪ್ರೇಮಿಯಾದುದನ್ನು ಕೇಳಿದ ಮುಸ್ಕಾನ್ ಅದಕ್ಕೆ ಸಮ್ಮತಿ ನೀಡಿದ್ದಾಳೆ.
ಕೊನೆಗೆ ಮದುವೆಯವರೆಗೆ ಮಾತುಕತೆ ಹೋಗಿದೆ. ಆದರೆ ಫಾರೂಕ್ ಮತ್ತು ಮುಸ್ಕಾನ್ ನಡುವಿನ ಪ್ರೀತಿಯನ್ನು ಎರಡೂ ಮನೆಯವರು ತಿರಸ್ಕರಿಸಿದ್ದರಂತೆ. ಆದರೆ ಈ ಜೋಡಿ ವಿರೋಧದ ನಡುವೆಯೂ ಮದುವೆಯಾಗಿದ್ದಾರೆ. ಈ ಜೋಡಿಯನ್ನು ಯೂಟ್ಯೂಬರ್ ಸಂದರ್ಶನ ಮಾಡಿದ್ದು, ಇಬ್ಬರು ಪ್ರೀತಿ ಹುಟ್ಟಿದ ಬಗೆಯನ್ನು ವಿವರವಾಗಿ ಹೇಳಿದ್ದಾರೆ. ಸದ್ಯ ಈ ಜೋಡಿಯ ಬಗ್ಗೆ ಪಾಕಿಸ್ತಾನದಲ್ಲಿ ಮಾತುಗಳು ಕೇಳಿಬರುತ್ತಿವೆ. (ಏಜೆನ್ಸೀಸ್)