

ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮಗ ಝೈದ್ ಖಾನ್ ಅವರ ಬಹು ನಿರೀಕ್ಷಿತ ಬನಾರಸ್ ಚಿತ್ರದ ದಿನಾಂಕ ಇದೀಗ ಘೋಷಣೆಯಾಗಿದೆ.
ಸಿನಿಮಾದಲ್ಲಿ ಅವರಿಗೆ ನಾಯಕಿಯಾಗಿ 'ಪಂಚತಂತ್ರ', 'ರಾಬರ್ಟ್' ಸಿನಿಮಾಗಳ ಖ್ಯಾತಿಯ ಸೋನಲ್ ನಟಿಸಿದ್ದಾರೆ. 'ಬ್ಯೂಟಿಫುಲ್ ಮನಸುಗಳು', 'ಬೆಲ್ ಬಾಟಂ' ಸಿನಿಮಾಗಳ ನಿರ್ದೇಶಕ ಜಯತೀರ್ಥ ಇದರ ನಿರ್ದೇಶಕರು. ‘ಬನಾರಸ್’ ಚಿತ್ರವು ಯಾವಾಗ ಬಿಡುಗಡೆಯಾಗಲಿದೆ ಎಂದು ಸಿನಿ ರಸಿಕರು ಕಾದು ಕುಳಿತಿದ್ದರು. ಅವರ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಬರುವ ನವೆಂಬರ್ ನಾಲ್ಕರಂದು ಚಿತ್ರವು ಜಗತ್ತಿನಾದ್ಯಂತ ತೆರೆ ಕಾಣಲಿದೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆಕಾಣಲಿದೆ.
ಚಿತ್ರವನ್ನು ತಿಲಕ್ ರಾಜ್ ಬಲ್ಲಾಳ್ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಈ ಸಿನಿಮಾದಲ್ಲಿ ಐದು ಹಾಡುಗಳಿವೆ. ವಿಶೇಷವೆಂದರೆ, ಸಿನಿಮಾ ರಿಲೀಸ್ಗೂ ಮುನ್ನವೇ ಈ ಸಿನಿಮಾದ ಆಡಿಯೋ ಹಕ್ಕುಗಳು ದೊಡ್ಡ ಮೊತ್ತಕ್ಕೆ ಸೇಲ್ ಆಗಿವೆ. ಜಮೀರ್ ಪುತ್ರನ ಚೊಚ್ಚಲ ಸಿನಿಮಾದ ಆಡಿಯೋ ಹಕ್ಕನ್ನು ಲಹರಿ ಮ್ಯೂಸಿಕ್ ಮತ್ತು ಟಿ-ಸಿರೀಸ್ ಸಂಸ್ಥೆಗಳು 3.5 ಕೋಟಿ ರೂ. ನೀಡಿ ಖರೀದಿ ಮಾಡಿದೆ. ಸ್ಯಾಂಡಲ್ವುಡ್ಮಟ್ಟಿಗೆ ಇದು ದೊಡ್ಡ ದಾಖಲೆ ಎಂದೇ ಹೇಳಲಾಗುತ್ತಿದೆ.