ಬ್ಲ್ಯಾಕ್‌ಲಿಸ್ಟ್‌ ಭೀತಿಯಲ್ಲಿ ಪಾಕ್‌ ಪ್ರಧಾನಿ ಗಡಗಡ: ಮಾಧ್ಯಮದೆದುರು ಗೋಳು ತೋಡಿಕೊಂಡಿದ್ದೇನು?

imran khan
Published on

ಇಸ್ಲಾಮಾಬಾದ್: ಅಂತಾರಾಷ್ಟ್ರೀಯ ಭಯೋತ್ಪಾದಕ ಹಣಕಾಸು ವಾಚ್‌ಡಾಗ್‌ ‘ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್‌’ (ಎಫ್ಎಟಿಎಫ್) ಎದುರು ಕೆಂಗಣ್ಣಿಗೆ ಗುರಿಯಾಗಿರುವ ಪಾಕಿಸ್ತಾನವು, ಭಯೋತ್ಪಾದನೆಯನ್ನು ಮಟ್ಟ ಹಾಕಲು ಇದಾಗಲೇ ಈ ದೇಶವನ್ನು ಗ್ರೇ ಪಟ್ಟಿಗೆ ಸೇರಿಸಿ ಎರಡು ವರ್ಷಗಳಾಗಿವೆ.

ಆದರೆ ಭಯೋತ್ಪಾದನಾ ಚಟುವಟಿಕೆ ಇನ್ನೂ ಮುಂದುವರೆಸಿರುವ ಹಿನ್ನೆಲೆಯಲ್ಲಿ, ಪಾಕಿಸ್ತಾನವನ್ನು ಆರ್ಥಿಕ ಕಪ್ಪು ಪಟ್ಟಿಗೆ ಸೇರಿಸಲು ಚಿಂತನೆ ನಡೆಸಿರುವ ಬೆನ್ನಲ್ಲೇ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಗೋಳೋ ಎನ್ನುತ್ತಿದ್ದಾರೆ.

ಪಾಕಿಸ್ತಾನದ ಚಾನೆಲ್‌ ಒಂದಕ್ಕೆ ಸಂದರ್ಶನ ನೀಡಿರುವ ಇಮ್ರಾನ್‌ ಖಾನ್‌, ’ಒಂದು ವೇಳೆ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಿಬಿಟ್ಟರೆ, ಯಾವುದೇ ದೇಶ ನಮ್ಮ ಜತೆ ಹಣಕಾಸು ವ್ಯವಹಾರ ಇಟ್ಟುಕೊಳ್ಳುವುದಿಲ್ಲ. (ಇದಾಗಲೇ ಉತ್ತರ ಕೊರಿಯಾ ಮತ್ತು ಇರಾನ್‌ ದೇಶಗಳು ಆರ್ಥಿಕ ಕಪ್ಪು ಪಟ್ಟಿಯಲ್ಲಿವೆ). ಹೀಗೆ ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮನ್ನು ಕೇಳುವವರೇ ಇರುವುದಿಲ್ಲ. ಯಾವುದೇ ಹಣಕಾಸು ಸಂಸ್ಥೆಗಳು ನಮ್ಮೊಂದಿಗೆ ವ್ಯವಹರಿಸುವುದಿಲ್ಲ. ಇದು ಅತ್ಯಂತ ಕಠಿಣವಾಗಿರುವ ಪರಿಸ್ಥಿತಿ’ ಎಂದಿದ್ದಾರೆ.

ಒಂದು ವೇಳೆ ನಾವು ಕಪ್ಪುಪಟ್ಟಿಗೆ ಸೇರಲ್ಪಟ್ಟರೆ, ಪಾಕಿಸ್ತಾನದ ರೂಪಾಯಿ ಮೌಲ್ಯ ಪಾತಾಳಕ್ಕೆ ಇಳಿಯುತ್ತದೆ. ಹೀಗಾದರೆ ಅದರ ಪ್ರಮಾಣ ಎಷ್ಟು ಕೆಳಕ್ಕೆ ಹೋಗುತ್ತದೆ ಎನ್ನುವುದನ್ನು ಊಹಿಸುವುದೂ ಕಷ್ಟವಾಗುತ್ತದೆ. ಪರಿಸ್ಥಿತಿ ಮಿತಿ ಮೀರಿದರೆ, ವಿದ್ಯುತ್, ಅನಿಲ, ತೈಲ ಸೇರಿದಂತೆ ಎಲ್ಲದರ ದರವೂ ಹೆಚ್ಚಾಗಿ ನಮ್ಮ ಇಡೀ ಆರ್ಥಿಕತೆಯೇ ನಾಶವಾಗುತ್ತದೆ ಎಂದು ಇಮ್ರಾನ್‌ ಖಾನ್‌ ಗೋಳು ತೋಡಿಕೊಂಡಿದ್ದಾರೆ.

ಭಾರತವು ತನ್ನ ದೇಶವನ್ನು ಕಪ್ಪುಪಟ್ಟಿಗೆ ತಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಇಮ್ರಾನ್‌ ಖಾನ್‌,ಎರಡು ವರ್ಷಗಳಿಂದ ಭಾರತವು ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಲಾಬಿ ಮಾಡುವ ಮೂಲಕ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ದೂರಿದರು.

ಪಾಕಿಸ್ತಾನದ ಸರ್ಕಾರದ ಅಂದಾಜಿನ ಪ್ರಕಾರ, ಪಾಕಿಸ್ತಾನದ ಎಫ್‌ಎಟಿಎಫ್ ಬೂದು ಪಟ್ಟಿಯು ದೇಶಕ್ಕೆ ವಾರ್ಷಿಕವಾಗಿ ಸುಮಾರು 10 ಶತಕೋಟಿ ಡಾಲರ್‌ಗಳಷ್ಟು ಹಾನಿಯನ್ನುಂಟುಮಾಡುತ್ತಿದೆ.

ಅಕ್ರಮ ಹಣ ವರ್ಗಾವಣೆ, ಭಯೋತ್ಪಾದಕರಿಗೆ ಹಣಕಾಸು ನೆರವು, ಇತರ ಬೆದರಿಕೆ ಮತ್ತು ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆಗೆ ಧಕ್ಕೆ ತರುವುದನ್ನು ನಿಗ್ರಹಿಸಲು 1989ರಲ್ಲಿ ಸ್ಥಾಪಿಸಲ್ಪಟ್ಟ ಅಂತಾರಾಷ್ಟ್ರೀಯ ಸಂಸ್ಥೆ ಎಫ್ಎಟಿಎಫ್ ಆಗಿದೆ.

ಎಫ್ಎಟಿಎಫ್ ನಿಯಮ ಪ್ರಕಾರ, ಬೂದು (ಗ್ರೆ ಲಿಸ್ಟ್) ಮತ್ತು ಕಪ್ಪು(ಬ್ಲಾಕ್) ಪಟ್ಟಿ ಮಧ್ಯೆ ಒಂದು ಅಗತ್ಯದ ಹಂತವಿದ್ದು ಅದನ್ನು ಕಪ್ಪು ಬೂದು ಪಟ್ಟಿ ಎನ್ನಲಾಗುತ್ತದೆ. ಇದರರ್ಥ, ಬಲವಾದ ಎಚ್ಚರಿಕೆಯನ್ನು ದೇಶಕ್ಕೆ ನೀಡುವುದಾಗಿದ್ದು ಈ ಮೂಲಕ ತನ್ನನ್ನು ತಿದ್ದುಕೊಂಡು ಸುಧಾರಿಸಿಕೊಳ್ಳಲು ಸಂಬಂಧಪಟ್ಟ ದೇಶಕ್ಕೆ ಕೊನೆಯ ಅವಕಾಶವಾಗಿರುತ್ತದೆ. ಮೂರನೇ ಹಂತದವರೆಗೆ ಎಚ್ಚರಿಕೆಯ ಸಂದೇಶವನ್ನು ಕಪ್ಪು ಬೂದು ಪಟ್ಟಿ ಎಂದು ಕರೆಯಲಾಗುತ್ತದೆ. ಇದಾಗಲೇ ಪಾಕಿಸ್ತಾನ ಬೂದು ಪಟ್ಟಿಗೆ ಸೇರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net