VIDEO: ವಿಐಪಿ ಕಾರ್​ ಬಿಟ್ಟು ಆಟೋದಲ್ಲಿ ಪಾಕ್​ ಪ್ರಧಾನಿ​? ಹೀಗೇಕಾಯ್ತೆಂದು ಪ್ರಶ್ನಿಸ್ತಿದ್ದಾರೆ ಜನ!

imrankhan
Published on

ಕರಾಚಿ: ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​, ಯಾವುದಾದರೂ ರೀತಿಯಲ್ಲಿ ಸುದ್ದಿಯಲ್ಲಿ ಇರುತ್ತಾರೆ. ಹೆಚ್ಚಾಗಿ ಇವರು ಸುದ್ದಿಯಾದರು ಎಂದರೆ ಅಲ್ಲಿ ಹಾಸ್ಯಾಸ್ಪದ ಘಟನೆಗಳು ನಡೆದಿವೆ ಎಂದೇ ಅರ್ಥ ಕಲ್ಪಿಸುವಷ್ಟರ ಮಟ್ಟಿಗೆ ಸ್ಥಿತಿ ಇದೆ.

ಏನಾದರೊಂದು ಎಡವಟ್ಟು ಮಾಡುತ್ತಲೇ, ಭಾರತ ಸೇರಿದಂತೆ ಕೆಲವು ರಾಷ್ಟ್ರಗಳ ಜತೆ ವೈರತ್ವ ಕಟ್ಟಿಕೊಳ್ಳಲು ಯೋಜನೆ ರೂಪಿಸುವಲ್ಲಿ ಇವರು ನಿಸ್ಸೀಮರು. ಆದರೆ ಇವರು ರೂಪಿಸುವ ಹಲವು ಯೋಜನೆಗಳು ಕೊನೆಗೆ ವಿಫಲವಾಗುವುದೂ ಅಷ್ಟೇ ಸತ್ಯ.

ಅದೇನೇ ಇರಲಿ. ಸದ್ಯ ಅಂತೂ ಪಾಕಿಸ್ತಾನದ ಈ ಪ್ರಧಾನಿ ಭಾರಿ ವೈರಲ್​ ಆಗಿಬಿಟ್ಟಿದ್ದಾರೆ. ಇದಕ್ಕೆ ಕಾರಣ, ಪಾಕಿಸ್ತಾನದ ಬೀದಿಗಳಲ್ಲಿ ಇವರು ಕಾಣಿಸಿಕೊಂಡಿರುವುದು, ಅಂದರೆ ಆಟೋ ಒಂದರಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ಇವರು ಆಟೋದಲ್ಲಿ ಇರುವ ದೃಶ್ಯ ಇದೀಗ ಪಾಕಿಸ್ತಾನ ಮಾತ್ರವಲ್ಲದೇ, ಬೇರೆ ಬೇರೆ ದೇಶಗಳಲ್ಲಿಯೂ ಭಾರಿ ಸುದ್ದಿ ಮಾಡುತ್ತಿದೆ. ಪ್ರಧಾನಿಗಾಗಿ ಇರುವ ಭದ್ರತೆ, ವಿಐಪಿ ಕಾರು ಎಲ್ಲವನ್ನೂ ಬಿಟ್ಟು ಆಟೋದಲ್ಲಿ ಸಂಚಾರ ಮಾಡುವ ಸ್ಥಿತಿ ಏಕೆ ಬಂತು ಎಂದು ಕಮೆಂಟಿಗರು ಪ್ರಶ್ನಿಸುತ್ತಿದ್ದಾರೆ.

ಆಟೋದ ಹಿಂಭಾಗದಲ್ಲಿ ಇವರು ಇರುವ ದೃಶ್ಯವನ್ನು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ಇದಕ್ಕೆ ಹಲವಾರು ರೀತಿಯ ತಮಾಷೆಯ ಕಮೆಂಟ್​ಗಳು ಬರುತ್ತಿವೆ.

ಆದರೆ ಅಸಲಿಗೆ ಈ ಆಟೋದಲ್ಲಿ ಇರುವವರು ನಿಜವಾದ ಇಮ್ರಾನ್​ ಖಾನ್​ ಅಲ್ಲ, ಬದಲಿಗೆ ಅವರನ್ನು ಹೋಲುವ ವ್ಯಕ್ತಿ. ಆದರೆ ಇವರು, ನೋಡಲು ಥೇಟ್​ ಇಮ್ರಾನ್​ ಖಾನ್​ ಅವರಂತೆಯೇ ಇದ್ದಾರೆ. ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ರಿಕ್ಷಾ ಓಡಿಸುತ್ತಿದ್ದಾರೆ ಇವರು.

ಕಪ್ಪು ಕುರ್ತಾದಲ್ಲಿರುವ ಈ ವ್ಯಕ್ತಿ ಇಮ್ರಾನ್ ಖಾನ್‌ ತಮ್ಮ ಯುವ ವಯಸ್ಸಿನಲ್ಲಿ ಹೇಗೆ ಕಾಣಿಸುತ್ತಿದ್ದರೋ ಹಾಗೆಯೇ ಇರುವುದರಿಂದ ಇಮ್ರಾನ್​ ಖಾನ್​ ಅವರೇ ಮೇಕಪ್​ ಮಾಡಿಕೊಂಡು ಆಟೋದಲ್ಲಿ ಸಂಚರಿಸುತ್ತಿರುವುದನ್ನು ನೋಡಿ ಕಮೆಂಟಿಗರು ತಮಾಷೆ ಮಾಡುತ್ತಿದ್ದಾರೆ.

ನೀವೂ ನೋಡಿ ಈ ವೈರಲ್​ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net