

ಬೆಂಗಳೂರು: ಕರೊನಾ ಸೋಂಕು ಹಿನ್ನೆಲೆಯಲ್ಲಿ ಮನೆಯಿಂದ ಕೆಲಸ ಮತ್ತು ಆಲ್‌ಲೈನ್ ತರಗತಿ ನಡೆಯುತ್ತಿರುವ ಕಾರಣ ಲ್ಯಾಪ್‌ಟಾಪ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದನ್ನೇ ದುರುಪಯೋಗ ಪಡಿಸಿಕೊಂಡ ಸೈಬರ್ ಕಳ್ಳರು, ಆನ್‌ಲೈನ್‌ನಲ್ಲಿ ಕಡಿಮೆ ಬೆಲೆಗೆ ಲ್ಯಾಪ್‌ಟಾಪ್ ಮಾರಾಟಕ್ಕಿಟ್ಟು ವಂಚನೆ ಮಾಡುತ್ತಿದ್ದಾರೆ.
ರೇಸ್‌ಕೋರ್ಸ್ ರಸ್ತೆಯ ಆದಿತ್ಯಾ ಎಂಬಾತ ವಿದ್ಯಾರ್ಥಿ, 1.30 ಲಕ್ಷ ರೂ. ವಂಚನೆಗೆ ಒಳಗಾಗಿದ್ದರೇ ಮತ್ತೊಂದು ಪ್ರಕರಣದಲ್ಲಿ ವಸಂತನಗರದ ಖಾಸಗಿ ಕಂಪನಿ ನೌಕರ ಅರ್ಜುನ್ ಎಂಬುವರು 3.31 ಲಕ್ಷ ರೂ. ವಂಚನೆಗೆ ಒಳಗಾಗಿದ್ದು, ಕೇಂದ್ರ ವಿಭಾಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 18ರಂದು ವಿದ್ಯಾರ್ಥಿ ಆದಿತ್ಯಾಗೆ ಇನ್‌ಸ್ಟ್ರಾಗ್ರಾಮ್‌ನಲ್ಲಿ ಅಪರಿಚಿತ ವ್ಯಕ್ತಿ ಪರಿಚಯನಾಗಿದ್ದಾನೆ. ಆನ್‌ಲೈನ್ ಶಾಪಿಂಗ್‌ನಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳ ಮಾರಾಟ ಮಾಡುತ್ತಿರುವುದಾಗಿ ಹೇಳಿದ್ದಾನೆ. ಅದಕ್ಕೆ ಆದಿತ್ಯಾ, ಲ್ಯಾಪ್‌ಟಾಪ್‌ಯೊಂದು ಬೇಕೆಂದು ಕೇಳಿದಾಗ ಹಂತ ಹಂತವಾಗಿ 1.30 ಲಕ್ಷ ರೂ. ವಸೂಲಿ ಮಾಡಿ ಸೈಬರ್ ಕಳ್ಳ ವಂಚನೆ ಮಾಡಿದ್ದಾನೆ. ಹಣ ವಾಪಸ್ ಕೇಳಿದಾಗ ಸಂಪರ್ಕ ಕಡಿತ ಮಾಡಿಕೊಂಡಿದ್ದು, ವಿದ್ಯಾರ್ಥಿ ಕೊಟ್ಟ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಅದೇ ರೀತಿ ಫೇಸ್‌ಬುಕ್‌ನಲ್ಲಿ ಖಾಸಗಿ ಕಂಪನಿ ನೌಕರ ಅರ್ಜುನ್‌ಗೆ ಪರಿಚಯನಾದ ವ್ಯಕ್ತಿಯೊಬ್ಬ ಕಡಿಮೆ ಬೆಲೆಗೆ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಕೊಡಿಸುವುದಾಗಿ ಹೇಳಿದ್ದಾನೆ. ಅದನ್ನು ನಂಬಿದ ನೌಕರ, ಲ್ಯಾಪ್‌ಟಾಪ್ ಬೇಕೆಂದು ಕೇಳಿದಾಗ ತನ್ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ. ಆನಂತರ ಪಾರ್ಸೆಲ್ ಮಾಡುತ್ತಿರುವುದಾಗಿ ಹೇಳಿ ಹಂತಹಂತವಾಗಿ 3.31 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ. ಈ ಎರಡು ಪ್ರಕರಣಗಳಲ್ಲಿ ಆನ್‌ಲೈನ್ ಶಾಪಿಂಗ್ ನೆಪದಲ್ಲಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.