

ನನ್ನ ಪತಿ ಈಗ ವಿಚ್ಛೇದನ ಕೊಡು ಎಂದು ಪೀಡಿಸುತ್ತಿದ್ದಾರೆ, ಇಲ್ಲದಿದ್ದರೆ ಮಗುವನ್ನು ಕರೆದುಕೊಂಡು ಹೋಗಿ ಬಿಡುವುದಾಗಿ ಹೆದರಿಸುತ್ತಿದ್ದಾರೆ. ನನಗೆ ವಿಚ್ಛೇದನ ಕೊಡಲು ಅಭ್ಯಂತರವಿಲ್ಲ. ಆದರೆ ಅವರು ಮಗುವನ್ನು ನೋಡಲು ಬರಲೇಬಾರದು ಎಂದು ನ್ಯಾಯಾಲಯ ಆದೇಶ ಕೊಡಬೇಕು. ಇದನ್ನು ಪಡೆಯಲು ಏನು ಮಾಡಬೇಕು.
ಉತ್ತರ: ಮಗುವಿನ ಕಸ್ಟಡಿಗೂ ವಿಚ್ಛೇದನಕ್ಕೂ ಬೇರೇ ಬೇರೇ ಕಾನೂನುಗಳಿವೆ. ನಿಮಗೂ ವಿಚ್ಛೇದನ ಕೊಡಬೇಕು ಎನ್ನಿಸಿದರೆ, ನೀವಿಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಹಾಕಬಹುದು. ಮಗುವಿನ ವಿಷಯಕ್ಕೆ ಬಂದರೆ, ನಿಮ್ಮ ಪತಿ ʼನಾನು ಮಗುವನ್ನು ನೋಡುವುದೇ ಇಲ್ಲʼ ಎನ್ನುವುದನ್ನು ಒಪ್ಪಿದರೂ, ನೀವು ಅದಕ್ಕೆ ಒಪ್ಪಬಾರದು. ಮಗುವಿಗೆ ತಂದೆ ತಾಯಿ ಇಬ್ಬರೂ ಬೇಕು ಎನ್ನುವುದನ್ನು ನೀವು ಮರೆಯಬಾರದು. ತಂದೆ ಆಗಾಗಲಾದರೂ ಬಂದು ಮಗುವನ್ನು ನೋಡುವುದು ಮಗುವಿನ ಆರೋಗ್ಯಕರ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದು. ನಿಮ್ಮ ಪತಿ ಮಗುವನ್ನು ನೋಡಲು ಬರಲೇಬಾರದು ಎನ್ನುವ ಆದೇಶವನ್ನು ನ್ಯಾಯಾಲಯದಿಂದ ನೀವು ನಿರೀಕ್ಷಿಸಲು ಸಾಧ್ಯವಿಲ್ಲ.
ಆದರೆ, ಇಷ್ಟು ವರ್ಷಗಳ ಕಾಲ ನಿಮ್ಮ ಹತ್ತಿರ ಇರುವ ಮಗುವನ್ನು ನಿಮ್ಮ ಸುಪರ್ದಿನಿಂದ ತೆಗೆದು ನಿಮ್ಮ ಪತಿಗೆ ಕೊಡುವಂತೆ ನ್ಯಾಯಾಲಯ ಸಾಮಾನ್ಯವಾಗಿ ಆದೇಶ ಮಾಡುವುದಿಲ್ಲ. ನೀವು ಹೆದರ ಬೇಕಿಲ್ಲ. ನಿಮ್ಮ ಪತಿಗೆ ವಿಸಿಟೇಷನ್ ರೈಟ್ಸ್/ ಮಗುವನ್ನು ಭೇಟಿ ಮಾಡುವ , ಮಗುವಿನೊಂದಿಗೆ ಸಮಯ ಕಳೆಯುವ ಅವಕಾಶವನ್ನು ನ್ಯಾಯಾಲಯ ಮಾಡಿಕೊಡಬಹುದು.
ನ್ಯಾಯಾಲಯದ ಮೆಟ್ಟಿಲು ಹತ್ತುವ ಮೊದಲು, ನೀವು ನಿಮ್ಮ ತಾಲ್ಲೂಕಿನ ನ್ಯಾಯಾಲಯದಲ್ಲಿರುವ ಮಧ್ಯಸ್ಥಿಕೆ ಕೇಂದ್ರಕ್ಕೆ ನಿಮ್ಮಿಬ್ಬರ ನಡುವೆ ಇರುವ ವ್ಯಾಜ್ಯವನ್ನು, ವ್ಯಾಜ್ಯ ಪೂರ್ವ ಮಧ್ಯಸ್ಥಿಕೆಯ ಮೂಲಕ ಪರಿಹರಿಸಿಕೊಡಿ ಎಂದು ಅರ್ಜಿ ಕೊಡಿ. ಮಧ್ಯಸ್ಥಿಕೆ ಕೇಂದ್ರದವರು ನಿಮ್ಮಿಬ್ಬರನ್ನೂ ಕರೆಯಿಸಿ , ನುರಿತ ಮಧ್ಯಸ್ಥಿಕೆಗಾರರ ಸಹಾಯದಿಂದ ನಿಮ್ಮ ಸಮಸ್ಯೆ ಪರಿಹರಿಸಲು ಸಹಾಯ ಮಾಡುತ್ತಾರೆ.