

ನೋಯ್ಡಾ (ಉತ್ತರ ಪ್ರದೇಶ): ಈ ಚಿತ್ರದಲ್ಲಿ ಕಾಣಿಸುತ್ತಿರುವುದು ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಬೃಹತ್ ಅವಳಿ ಗೋಪುರ. ಸೂಪರ್ ಟೆಕ್ ಅಪೆಕ್ಸ್ ಮತ್ತು ಸಿಯಾನಿ ಎಂಬುದು ಈ ಕಟ್ಟಡಗಳ ಹೆಸರು. 2004ರಲ್ಲಿ ನಿರ್ಮಾಣ ಆಗಿರುವ ಈ ಗೋಪುರದ ನಿರ್ಮಾಣ ಕಾರ್ಯಕ್ಕೆ ತಗುಲಿದ್ದು ಸುಮಾರು 70 ಕೋಟಿ ರೂಪಾಯಿ. ಇನ್ನು ಕೆಲವೇ ಗಂಟೆಗಳಲ್ಲಿ ಈ ಬೃಹತ್ ಗೋಪುರ ಇತಿಹಾಸದ ಪುಟ ಸೇರಲಿದೆ. ಇದಕ್ಕಾಗಿ ಖರ್ಚು ಮಾಡುತ್ತಿರುವುದು 20 ಕೋಟಿ ರೂಪಾಯಿ! ವರ್ಷಗಟ್ಟಲೆ ನಿರ್ಮಾಣ ಆಗಿರುವ ಈ ಕಟ್ಟಡ ಕೇವಲ 12 ಸೆಕೆಂಡ್ಗಳಲ್ಲಿ ಧರೆಗೆ ಉರುಳಲಿದೆ! ಇದಕ್ಕಾಗಿ ಮಧ್ಯಾಹ್ನ 2.30ರ ಮುಹೂರ್ತ ಫಿಕ್ಸ್ ಮಾಡಲಾಗಿದೆ.
ಅಷ್ಟಕ್ಕೂ ಇಂಥದ್ದೊಂದು ಕಾರ್ಯ ನಡೆಯುತ್ತಿರುವುದಕ್ಕೆ ಕಾರಣ ಸುಪ್ರೀಂಕೋರ್ಟ್ ಆದೇಶ. ಈ ಅವಳಿ ಕಟ್ಟಡಗಳ ಒಂದು ಕಟ್ಟಡ 103 ಮೀಟರ್ ಹಾಗೂ ಇನ್ನೊಂದು 97 ಮೀಟರ್ ಎತ್ತರವಿದೆ. ಈ ಗೋಪುರದಲ್ಲಿ ಒಟ್ಟು 915 ಫ್ಲ್ಯಾಟ್ಗಳು, 20 ಕಮರ್ಷಿಯಲ್ ಅಂಗಡಿಗಳಿವೆ.
ಈ ಗೋಪುರಗಳನ್ನು ಅಕ್ರಮವಾಗಿ ಕಟ್ಟಿರುವ ಕಾರಣ ನೆಲಸಮಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದೆ. ಸೂಪರ್ ಟೆಕ್ ಎಮರಾಲ್ಡ್ ಸಂಸ್ಥೆ ನಿಯಮಾವಳಿ ಉಲ್ಲಂಘಿಸಿ ನಿರ್ಮಿಸಿದ್ದರ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನಿಬಂಧನೆಗಳಿಗೆ ವಿರುದ್ಧವಾಗಿ ನಿರ್ಮಿಸುತ್ತಿದ್ದ ಅವಳಿ ಗೋಪುರಗಳನ್ನು ಕೆಡವಲು ಆಗಸ್ಟ್ 31, 2021ರಂದು ಆದೇಶಿಸಿತ್ತು.
ಹೀಗಿದೆ ಸಿದ್ಧತೆ:
ಇದಾಗಲೇ ಗೋಪುರ ನೆಲಸಮಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿಕೊಂಡಿದೆ. ನೆಲಸಮಕ್ಕಿಂತ ಮುಂಚಿನ ಪ್ರಕ್ರಿಯೆ ನಸುಕಿನಲ್ಲಿಯೇ ಶುರುವಾಗಿದೆ. ಈ ಕಾರ್ಯಾಚರಣೆಗೋಸ್ಕರ 3,700 ಕೆಜಿ ಸ್ಫೋಟಕ ಬಳಕೆ ಮಾಡಿಕೊಳ್ಳುತ್ತಿದೆ.
ಮಧ್ಯಾಹ್ನ 2:30ಕ್ಕೆ 12 ಸೆಂಕೆಡ್ಗಳಲ್ಲಿ ಗೋಪುರ ಧರೆಗೆ ಉರುಳಲಿದೆ. ಈ ವೇಳೆ ಎನ್ಡಿಆರ್ಎಫ್, ಸಿಬಿಆರ್ಐ ಸೇರಿದಂತೆ ಇತರೆ ಅಧಿಕಾರಿಗಳು ಸ್ಥಳದಲ್ಲಿ ಹಾಜರು ಇರಲಿದ್ದಾರೆ. ಈ ಗೋಪುರಗಳ ಸುತ್ತಮುತ್ತ ಸುಮಾರು 7 ಸಾವಿರ ಜನರು ವಾಸವಾಗಿದ್ದು, ಇದಾಗಲೇ ಅವರನ್ನು ಸ್ಥಳಾಂತರ ಮಾಡಲಾಗಿದೆ. ಸಂಜೆ 5 ಗಂಟೆಗೆ ಎಲ್ಲ ಸೇವೆ ಪುನಾರಂಭಗೊಳ್ಳಲಿವೆ. ನಂತರ ಎಲ್ಲ ನಿವಾಸಿಗಳು ತಮ್ಮ ಮನೆಗಳಿಗೆ ತೆರಳಬಹುದು ಎಂದು ಸೂಚನೆ ನೀಡಲಾಗಿದೆ. ಈ ಪ್ರದೇಶದಲ್ಲಿ ವಿದ್ಯುತ್, ಅನಿಲ್ ಸೇರಿದಂತೆ ಎಲ್ಲ ಸೇವೆಗಳು ಬಂದ್ ಆಗಿವೆ.
ಅವಳಿ ಕಟ್ಟಡ ಬ್ಲಾಸ್ಟ್ ಮಾಡಲಿರುವ ಚೇತನ್ ದತ್ತಾ: ಎಡಿಫೈಸ್ ಇಂಜಿನಿಯರಿಂಗ್ ಮಾಡಿರುವ ಚೇತನ್ ದತ್ತಾ ಬ್ಲಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅವರು ಬಟನ್ ಒತ್ತುವ ಮೂಲಕ ಬಿಲ್ಡಿಂಗ್ ಧ್ವಂಸ ಮಾಡಲಿದ್ದಾರೆ. ಬಿಲ್ಡಿಂಗ್ ನೆಲಸಮಗೊಂಡ ನಂತರ ಈ ಪ್ರದೇಶದಲ್ಲಿ ಪರಿಶೀಲನೆ ಕಾರ್ಯ ಸಹ ನಡೆಯಲಿದೆ. (ಏಜೆನ್ಸೀಸ್)