

ನನಗೆ ಅದನ್ನು ಖಚಿತವಾಗಿ ತಿಳಿದುಕೊಳ್ಳಬೇಕಾಗಿದೆ. ಅದು ನನ್ನ ಸೇಫ಼್ಟಿಗಾಗಿ. ಏನು ಮಾಡಲಿ ತಿಳಿಸಿ. ಆ ಹುಡುಗ ಲವ್ ಮಾಡ್ತಾನೋ ಇಲ್ವೋ ತಿಳ್ಕೋಳೋದು ಹೇಗೆ ಮೇಡಂ? ಆದ್ರೆ ಅವನು ತುಂಬಾ ಕಾಡ್ತಿದ್ದಾನೆ.
ಉತ್ತರ: ಇಂದಿನ ವಿದ್ಯಾಭ್ಯಾಸದ ಕ್ರಮದಲ್ಲಿ ಮಿದುಳೊಂದು ಮಾಹಿತಿ ಕೇಂದ್ರವಾಗುತ್ತಿದೆಯೇ ವಿನಃ ’ ಕಾಮನ್ಸೆನ್ಸ್ ’ ಎನ್ನುವುದನ್ನು ಬೆಳೆಸುತ್ತಿಲ್ಲ. ಇಂದಿನ ಯುವ ಪೀಳಿಗೆಯೂ ತಮ್ಮದೇ ಸ್ವಾರ್ಥದಲ್ಲಿ ಮುಳುಗಿ ಹೊರ ಜಗತ್ತಿನಲ್ಲಿಯ ವ್ಯವಹಾರವನ್ನು ಗಮನಿಸುತ್ತಾ ’ ಕಾಮನ್ಸೆನ್ಸ್ ’ ಬೆಳೆಸಿಕೊಳ್ಳುತ್ತಿಲ್ಲ. ಈ ಕಾರಣದಿಂದಲೇ ಇಂದಿನ ಪೀಳಿಗೆ ದಿಕ್ಕುದೆಸೆಯಿಲ್ಲದೇ ಹೈರಾಣಾಗುತ್ತಿದೆ. ಈಗ ನಿಮ್ಮದೇ ಪತ್ರವನ್ನು ಉದಾಹರಣೆಯಾಗಿಟ್ಟುಕೊಂದು ನಿಮ್ಮ ಕಾಮನ್ಸೆನ್ಸ್ ಕೆಲಸಮಾಡಬೇಕಾದ ಕಡೆಯೆಲ್ಲಾ ಕೆಲಸವನ್ನೇ ಮಾಡದೇ ಹೇಗೆ ಮಲಗಿಬಿಟ್ಟಿದೆಯೆಂದು ಹೇಳುತ್ತೇನೆ ಕೇಳಿ. ನೀವು ಬಿ.ಇ ಓದುತ್ತಿರುವ ಹುಡುಗಿ. ಅಂದರೆ ಜಾಣೆಯೆಂದೇ ನನ್ನ ಲೆಕ್ಕ.
೧ ನೀವು ಕಣ್ಣಿನಿಂದಲೂ ನೋಡದ ಒಬ್ಬ ಮನುಷ್ಯ ” ನಾನು ನಿನ್ನನ್ನು ಪ್ರೀತಿಸುತ್ತೇನೆ ” ಎಂದ ಮಾತ್ರಕ್ಕೆ ನೀವು ಹೇಗೆ ನಂಬಿದಿರಿ?
೨ ನಿಮಗೆ ಫೋನ್ ಮಾಡುತ್ತಿರುವವರು ಹುಡುಗನೆಂದೇ ಹೇಗೆ ನಂಬುತ್ತೀರಿ? ಏಕೆಂದರೆ ಪ್ರತಿ ವ್ಯಕ್ತಿಗೂ ಮೂರು ರೀತಿಯ ವಯಸ್ಸು ಇರುತ್ತದೆ. ಒಂದು ದೇಹಕ್ಕಾಗುವ ವಯಸ್ಸು, ಎರಡು ಮನಸ್ಸಿನ ವಯಸ್ಸು, ಮೂರು ಕಂಠದ ವಯಸ್ಸು. ದೇಹಕ್ಕೆ ೫೦ ವಯಸ್ಸಾಗಿದ್ದರೂ ಕಂಠಕ್ಕೆ ೨೦ರ ಬನಿ ಇರಬಹುದು. ಖ್ಯಾತ ಚಲನಚಿತ್ರ ಗಾಯಕಿ ಬಿ.ಆರ್.ಛಾಯಾ ಅವರ ಕಂಠ ಕೇಳಿದ್ದೀರಾ? ಅವರು ಸಣ್ಣ ಹುಡುಗಿಗಾಗಿ ’ಉಪಾಸನೆ’ ಚಿತ್ರದಲ್ಲಿ ’ಸಂಪಿಗೆ ಮರದ ಚಿಗುರೆಲೆ ನಡುವೆ ಕೋಗಿಲೆ ಹಾಡಿತ್ತು ’ ಎನ್ನುವ ಹಾಡನ್ನು ಹಾಡಿದ್ದಾರೆ. ನಿಮ್ಮ ಈ ಗೆಳೆಯ ೫೦ರ ಆಸುಪಾಸಿನವನಾಗಿದ್ದು ನಿಮ್ಮ ಜೊತೆ ಆಟವಾಡುತ್ತಿರಬಹುದಲ್ಲವೇ?
೩ ” ರಾತ್ರಿ ಮೂಡು ಕೆಡುತ್ತದೆ, ಬೆಳಿಗ್ಗೆ ಸರಿಹೋಗುತ್ತದೆ ” ಎಂದು ಹುಚ್ಚುಚ್ಚಾಗಿ ಫೋನ್ ಮಾಡುವವನನ್ನು ಮಾನಸಿಕವಾಗಿ ಆರೋಗ್ಯವಂತನೆಂದು ಹೇಗೆ ನಂಬಿದಿರಿ? ತಲೆ ಕೆಟ್ಟಾಗ ಒಂದು ರೀತಿ ತಲೆ ಸರಿಯಿದ್ದಾಗ ಒಂದು ರೀತಿ ಮಾತಾಡುವವನನ್ನು ಯಾರಾದರೂ ಪ್ರೀತಿಸುತ್ತಾರೆಯೇ?
೪ ” ಅವನು ನನ್ನನ್ನು ಪ್ರೀತಿಸುತ್ತಾನೋ ಇಲ್ಲವೋ ಎಂದು ತಿಳಿದುಕೊಳ್ಳಬೇಕಾಗಿದೆ ” ಎಂದು ಬರೆಯುತ್ತೀರಲ್ಲ? ಈ ಕಾಮನ್ಸೆನ್ಸ್ಗೆ ಏನು ಹೇಳಲಿ? ಕಣ್ಣಿಂದ ನೋಡದ, ತಲೆಕೆಟ್ಟಂತೆ ಮಾತಾಡುವವನು ಪ್ರೀತಿಸಿದರೆಷ್ಟು ಬಿಟ್ಟರೆಷ್ಟು? ನಿಮ್ಮಂಥಾ ಜಾಣೆಯರು ಇಂಥಾ ಸ್ನೇಹಗಳನ್ನು ನಿವಾರಿಸಿಕೊಂಡು ಮುಕ್ತರಾಗುವ ಬಗ್ಗೆ ಯೋಚಿಸ ಬೇಕು. ಅದೇ ನಿಮ್ಮ ಸೇಫ಼್ಟಿ. ಅದು ಬಿಟ್ಟು ’ ಪ್ರೀತಿಸುತ್ತಾನೋ ಇಲ್ಲವೋ ’ ಎಂದು ತಳಮಳ ಪಡುವುದು ನಿಮಗೆ ಮಾನಸಿಕವಾಗಿಯೂ ಸೇಫ಼್ಟಿ ಅಲ್ಲ.
ಈಗ ಜಾಣತನದಿಂದ ಮುಂದಿನ ಹೆಜ್ಜೆಗಳನ್ನು ಇಡಿ. ಮತ್ತೊಮ್ಮೆ ಅವನು ಫೋನ್ ಮಾಡಿದಾಗ ವಾಟ್ಸ್ ಆಪ್ನ ಮೂಲಕ ಕ್ಯಾಮೆರಾ ಆನ್ ಮಾಡಿ ಮಾತಾಡಲು ತಿಳಿಸಿ. ಅವನ ಮೋರೆಯನ್ನಷ್ಟು ನೋಡಿ. ಅವನು ಮುದುಕನೋ ಹುಡುಗನೋ ಪತ್ತೆ ಮಾಡಿ. ಅವನು ನಿಜಕ್ಕೂ ಹುಡುಗನಾಗಿದ್ದರೂ ” ರಾತ್ರಿಯೊಂದು ರೀತಿ, ಬೆಳಿಗ್ಗೆ ಒಂದು ರೀತಿ ಮಾತಾಡುವ ನಿನ್ನ ಸ್ನೇಹವೂ ನನಗೆ ಬೇಡ” ವೆಂದು ತಿಳಿಸಿ.
ಅವನಿಗಿನ್ನೂ ೨೧ ವರ್ಷವೆಂದು ಬರೆದಿದ್ದೀರಿ. ಈ ವಯಸ್ಸಿಗೆ ಗಂಡುಮಕ್ಕಳಿಗೆ ಇನ್ನೂ ಬುದ್ಧಿ ಪ್ರೌಢವಾಗಿರುವುದಿಲ್ಲ. ಮಕ್ಕಳಂತಾಡುವ ಇಂಥವರನ್ನು ಕಟ್ಟಿಕೊಂಡು ಬದುಕುವುದು ಕಷ್ಟ. ನಿಮ್ಮ ವಯಸ್ಸೂ ಇನ್ನೂ ಚಿಕ್ಕದಿದೆ. ನಿಮ್ಮ ಮುಂದೆ ವಿದ್ಯಾಭ್ಯಾಸದ ಗುರಿಯಿದೆ. ಅದರ ಕಡೆ ಗಮನ ಹರಿಸಿ. ನಿಮಗಿನ್ನೂ ಬದುಕು ವಿಶಾಲವಾಗಿ ತೆರೆದಿದೆ. ಈಗಿನಿಂದಲೇ ಏಕೆ ಸ್ನೇಹ, ಸಖ, ಪ್ರಿಯಕರ ಎಂದೆಲ್ಲಾ ಹಲಬುತ್ತೀರಿ?
೩೦ವರ್ಷದ ನಂತರ ಓದುವುದು ಕಷ್ಟವಾಗುತ್ತದೆ. ಆದರೆ ಆಗ ಸಖನನ್ನೋ, ಪ್ರಿಯಕರನನ್ನೋ ಖಂಡಿತಾ ಪಡೆಯಬಹುದು. ಇಂಗ್ಲೀಷಿನ ಒಂದು ಸಣ್ಣ ನರ್ಸರಿ ರೈಮ್ ಕೇಳಿದ್ದೀರಾ? work while you work, play while you play, that is the game of happy and gay ಎಂದಿದ್ದಾನೆ ಕವಿ. ಯಾವಯಾವ ವಯಸ್ಸಿನಲ್ಲಿ ಏನೇನು ಮಾಡಬೇಕೋ ಅದನ್ನಷ್ಟೆ ಮಾಡಿದರೆ ಬದುಕು ಎನ್ನುವ ಈ ಆಟದಲ್ಲಿ ಸುಖ ಸಂತೋಷಗಳು ಹೆಚ್ಚುತ್ತವೆ. ನೀವೀಗ ನಿಮ್ಮವಿದ್ಯೆಯ ಕಡೆ ನಂತರ ಉದ್ಯೋಗದ ಕಡೆ ಗಮನ ಕೊಡಿ ಸಾಕು. ಮಿಕ್ಕಿದ್ದೆಲ್ಲಾ ಮುಂದೆ ತಾನಾಗಿಯೇ ಲಭಿಸುತ್ತದೆ.