

ಹೈದರಾಬಾದ್: ಮಕ್ಕಳು ಕೆಟ್ಟವರಿರಬಹುದು, ಆದರೆ ಅಮ್ಮ ಕೆಟ್ಟವಳು ಇರಲಾರಳು ಎನ್ನುವುದು ತೀರಾ ಹಳೆಯ ನಾಣ್ಣುಡಿ. ಆದರೆ ಇಲ್ಲೊಬ್ಬ ಅಮ್ಮ, ತನ್ನ ಹೆತ್ತ ಕರುಳಿಗೇ ಬೆಂಕಿ ಇಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ. ಇದಕ್ಕೆ ಕಾರಣ, ತನ್ನ ಮಗಳು ಬೇರೆ ಜಾತಿಯ ಹುಡುಗನನ್ನು ಮದುವೆಯಾಗಲು ಬಯಸಿದ್ದು!
ಮಗಳು ಅನ್ಯ ಕೋಮಿನ ಹುಡುಗನ ಪ್ರೀತಿಯ ಬಲೆಗೆ ಬಿದ್ದದ್ದು ತಿಳಿಯುತ್ತಲೇ ಯಿಯೊಬ್ಬಳು ತನ್ನ ಮಗಳಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಆದರೆ ಇನ್ನೂ ದುರದೃಷ್ಟ ಎಂದರೆ, ಅದೇ ಬೆಂಕಿ ತಾಯಿಗೂ ಹೊತ್ತಿಕೊಂಡಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಈ ಘಟನೆ ನಡೆದಿರುವುದು ತೆಲಂಗಾಣದ ಶಡ್ನಘರ್ನಲ್ಲಿ. ಮೃತರನ್ನು ತಾಯಿ ಚಂದ್ರಕಲಾ ಮತ್ತು ಮಗಳು ಶ್ರಾವಂತಿ ಎಂದು ಗುರುತಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ತಾಯಿ ಮತ್ತು ಮಗಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಶಡ್ನಗರ ಪೊಲೀಸರು ತಿಳಿಸಿದ್ದಾರೆ.
ಶ್ರಾವಂತಿ ತನ್ನೂರಿನ ಹುಡುಗನನ್ನು ಪ್ರೀತಿಸುತ್ತಿದ್ದು, ಹುಡುಗ ಬೇರೆ ಜಾತಿಯವನಾಗಿದ್ದನು. ಇವರಿಬ್ಬರ ಪ್ರೀತಿ ವಿಚಾರ ಅಪ್ಪ-ಅಮ್ಮನಿಗೆ ಗೊತ್ತಾಗಿದೆ. ನಂತರ ಅಮ್ಮ ಮಗಳಿಗೆ ಬೈದು ಬುದ್ಧಿ ಹೇಳಿದ್ದಾರೆ. ಆದರೂ ಶ್ರಾವಂತಿ ಕೇಳಲಿಲ್ಲ.
ಪದೇ ಪದೇ ಇದೇ ವಿಚಾರಕ್ಕೆ ಮಗಳು ಮತ್ತು ಪಾಲಕರ ನಡುವೆ ಅನೇಕ ಬಾರಿ ಜಗಳ ನಡೆಯುತ್ತಿತ್ತು. ಈ ಮದುವೆಗೆ ಒಪ್ಪಿಕೊಳ್ಳುವಂತೆ ಪಾಲಕರ ಬಳಿ ಕೈ ಮುಗಿದು ಮನವಿ ಮಾಡಿಕೊಂಡಿದದ ಶ್ರಾವಣಿ. ಇದರಿಂದ ಆಕ್ರೋಶಗೊಂಡ ತಂದೆ ಅವಳಿಗೆ ಸೀಮೆಎಣ್ಣೆ ಬಾಟಲ್ ಕೊಟ್ಟು ಪ್ರಿಯಕರನನ್ನು ಮರೆತು ಹೋಗು ಅಥವಾ ನೀನೇ ಸಾಯಿ ಎಂದು ಹೇಳಿದ್ದಾನೆ.
ಈ ವೇಳೆ ಚಂದ್ರಕಲಾ ತನ್ನ ಪತಿಯಿಂದ ಸೀಮೆಎಣ್ಣೆಯನ್ನು ಕಿತ್ತುಕೊಂಡು ಮಗಳು ಶ್ರಾವಂತಿಯ ಮೇಲೆ ಸುರಿದು ಬೆಂಕಿ ಹಚ್ಚಿದ್ದಾಳೆ. ಆದರೆ ಅಕಸ್ಮತ್ತಾಗಿ ಅವರಿಗೂ ಬೆಂಕಿ ಹೊತ್ತಿಕೊಂಡಿದ್ದು, ತಾಯಿ ಮತ್ತು ಮಗಳು ಶೇ.80ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದರು. ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.