

ಬೆಂಗಳೂರು: ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರ ವಿರುದ್ಧ ಕಾಂಗ್ರೆಸ್ ಚುನಾವಣೆ ಆಯೋಗಕ್ಕೆ ದೂರು ನೀಡಿದ್ದು, ಕ್ರಮಕೈಗೊಳ್ಳುವಂತೆ ಒತ್ತಾಯಿಸಿದೆ.
ಉಪ ಚುನಾವಣೆ ನಡೆಯುತ್ತಿರುವ ರಾಯಚೂರು ಜಿಲ್ಲೆ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡುವ ವೇಳೆ ಸಚಿವರು ಮೀಸಲಾತಿ ಹೆಚ್ಚಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಈ ರೀತಿ ಆಮಿಷ ಒಡ್ಡುವುದು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂಬುದು ಕೆಪಿಸಿಸಿಯ ಆರೋಪವಾಗಿದೆ.
ಪರಿಶಿಷ್ಟ ಜಾತಿಗೆ ಶೇ.17, ಪರಿಶಿಷ್ಟ ವರ್ಗಕ್ಕೆ ಶೇ.7ರಷ್ಟು ಮೀಸಲಾತಿ ಹೆಚ್ಚಳ ಮಾಡುವುದಾಗಿ ಮತ್ತು ಈ ರೀತಿ ಹೆಚ್ಚಿಸುವುದರಿಂದ ಹಲವು ಜಾತಿಗೆ ಅನುಕೂಲವಾಗಿದೆ ಎಂದು ಶ್ರೀರಾಮುಲು ಹೇಳಿದ್ದಾರೆ. ಈ ಹೇಳಿಕೆ ನೀಡಿ ನೀತಿ ಸಂಹಿತೆ ಉಲ್ಲಂಸಿದ ಸಚಿವರನ್ನು ಮೂರು ಕ್ಷೇತ್ರದ ಪ್ರಚಾರದಿಂದಲೇ ಹೊರಗಿಡಬೇಕು ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.