

ಲಂಡನ್: ಒಮ್ಮೊಮ್ಮೆ ಆಯಸ್ಸು ಮುಗಿದಿದೆ ಎಂದರೂ ಮುಗಿದಿರುವುದೇ ಇಲ್ಲ. ಮೃತಪಟ್ಟ ಎಂದುಕೊಂಡವರು ಎಚ್ಚರಗೊಳ್ಳುವ, ಉಸಿರಾಡುವ, ಕೈಕಾಲು ಆಡಿಸುವ ಕೆಲವು ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಲೇ ಇರುತ್ತವೆ.
ಅಂಥದ್ದೇ ಒಂದು ಘಟನೆ ಲಂಡನ್ನಲ್ಲಿ ನಡೆದಿದೆ. ರಸ್ತೆ ಅಪಘಾತದಲ್ಲಿ ಮೆದುಳು ಸ್ವಾಧೀನ ಕಳೆದುಕೊಂಡಿದ್ದ ಯುವಕನ ದೇಹದಲ್ಲಿನ ಅಂಗಾಂಗಗಳನ್ನ ದಾನ ಮಾಡಲು ವೈದ್ಯರು ಸಕಲ ಸಲಕರಣೆಗಳ ಜತೆ ಸಜ್ಜಾಗುತ್ತಿದ್ದರಂತೆಯೇ ಆ ವ್ಯಕ್ತಿ ಎಚ್ಚರಗೊಂಡ ಘಟನೆ ನಡೆದಿದೆ. ಅರೆ ಕ್ಷಣ ವೈದ್ಯರೇ ಕಂಗಾಲಾಗಿ ಹೋಗಿದ್ದಾರೆ.
18 ವರ್ಷದ ಲೆವೀಸ್ ರಾಬರ್ಟ್ಸ್ ಎಂಬಾತನಿಗೆ ಅಪಘಾತ ಸಂಭವಿಸಿತ್ತು. ಮಾರ್ಚ್ 13ರಂದು ವ್ಯಾನ್ಗೆ ಡಿಕ್ಕಿ ಹೊಡೆದ ಪರಿಣಾಮ ಆತನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತಲೆಗೆ ಭಾರೀ ಪ್ರಮಾಣದಲ್ಲಿ ಹೊಡೆತ ಬಿದ್ದಿತ್ತು. ಆದರೆ ಈ ಘಟನೆ ನಡೆದ ನಾಲ್ಕು ದಿನಗಳ ಬಳಿಕ ಆತನ ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿತ್ತು. ಇದರಿಂದ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಆತನ ಕುಟುಂಬಸ್ಥರ ಇಚ್ಛೆಯಂತೆ ಮೃತದೇಹದಿಂದ ಅಂಗಾಂಗಗಳನ್ನು ಬೇರ್ಪಡಿಸಿ ಅಗತ್ಯ ಇರುವವರಿಗೆ ದಾನ ಮಾಡಲು ವೈದ್ಯರು ಸಜ್ಜಾಗಿದ್ದರು. ಆಗ ಇದ್ದಕ್ಕಿದ್ದಂತೆಯೇ ಲೆವೀಸ್ ಉಸಿರಾಡಲು ಆರಂಭಿಸಿದ್ದಾನೆ. ಸರ್ಜರಿ ಮಾಡಲು ಸಲಕರಣೆ ಕೈಗೆತ್ತಿಕೊಂಡಿದ್ದ ವೈದ್ಯರೇ ದಂಗಾಗಿ ಹೋಗಿದ್ದಾರೆ. ಸದ್ಯ ಆತನಿಗೆ ಚಿಕಿತ್ಸೆ ಮುಂದುವರೆದಿದೆ.