

ಜೈಪುರ: ಪತ್ನಿಯನ್ನು ಕೊಲ್ಲುವುದಕ್ಕಾಗಿಯೇ ಆಕೆಯ ಹೆಸರಿನಲ್ಲಿ 35 ಲಕ್ಷ ರೂಪಾಯಿಗಳ ವಿಮೆ ಮಾಡಿರುವ ಭಯಾನಕ ಘಟನೆ ಮಧ್ಯಪ್ರದೇಶದ ರಾಜ್ಗಢದಲ್ಲಿ ನಡೆದಿದೆ. ಮಾಡಿರುವ ಸಾಲವನ್ನು ತೀರಿಸಲು ವಿಮೆ ಮಾಡಿಸಿ ನಂತರ ಆಕೆಯನ್ನು ಕೊಲ್ಲಲು ಐದು ಲಕ್ಷ ರೂಪಾಯಿ ಸುಪಾರಿ ನೀಡಿರುವ ಗಂಡ ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಇಂಥದ್ದೊಂದು ಖತರ್ನಾಕ್ ಐಡಿಯಾ ಮಾಡಿ ಪತ್ನಿಯನ್ನು ಕೊಂದವ 31 ವರ್ಷದ ಬದ್ರಿಪ್ರಸಾದ್ ಮೀನಾ. ಈತನ ಕೃತ್ಯಕ್ಕೆ ಬಲಿಯಾದವಳು 27 ವರ್ಷದ ಪತ್ನಿ ಪೂಜಾ ಮೀನಾ. ಸುಮಾರು 50 ಲಕ್ಷ ರೂಪಾಯಿ ಸಾಲವನ್ನು ಮಾಡಿಕೊಂಡಿದ್ದ ಬದ್ರಿಪ್ರಸಾದನಿಗೆ ಅದನ್ನು ತೀರಿಸಲು ಸಾಧ್ಯವಾಗಿರಲಿಲ್ಲ. ಸುಲಭದಲ್ಲಿ ಹಣ ಹೇಗೆ ಮಾಡಬಹುದು ಎಂದು ಇಂಟರ್ನೆಟ್ ಹುಡುಕಿದ್ದಾನೆ. ಆಗ ಆತನಿಗೆ ಈ ಮರ್ಡರ್ ಪ್ಲ್ಯಾನ್ ಬಗ್ಗೆ ತಿಳಿದುಬಂದಿದೆ. ಮೊದಲಿಗೆ ಪತ್ನಿಯ ಹೆಸರಿನಲ್ಲಿ ವಿಮೆ ಮಾಡಿಸಿ, ನಂತರ ಆಕೆ ಸತ್ತುಹೋದರೆ ವಿಮೆ ಹಣವು ತನಗೆ ಸಿಗುತ್ತದೆ, ಅದರಿಂದ ತಾನು ಸಾಲ ತೀರಿಸಬಹುದು ಎಂದು ಇಂಟರ್ನೆಟ್ನಲ್ಲಿ ನೋಡಿ ತಿಳಿದುಕೊಂಡ ಈತ ಅದೇ ರೀತಿ ಪತ್ನಿಯ ಕೊಲೆ ಮಾಡಲು ಐದು ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದಾನೆ.
ಅದರಂತೆ ಆತ, ಜುಲೈ 26 ರ ರಾತ್ರಿ 9 ಗಂಟೆಯ ಸುಮಾರಿಗೆ ಪತ್ನಿ ಮೀನಾಳನ್ನು ಬೈಕ್ನಲ್ಲಿ ಕರೆದುಕೊಂಡು ಹೋಗಿದ್ದಾನೆ. ನಡು ರಸ್ತೆಯಲ್ಲಿ ಬೈಕ್ ಹಾಳಾಯಿತು ಎಂದು ಸುಳ್ಳು ಹೇಳಿದ ಆತ, ಪತ್ನಿಯನ್ನು ಕೆಳಕ್ಕೆ ಇಳಿಸಿದ್ದಾನೆ. ಮೊದಲೇ ಮಾಡಿಕೊಂಡ ಪ್ಲ್ಯಾನ್ನಂತೆ ಸುಪಾರಿ ಪಡೆದಿದ್ದವರು ಬಂದು ಮಹಿಳೆಗೆ ಹಿಂದಿನಿಂದ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಎಲ್ಲವೂ ತಾನು ಅಂದುಕೊಂಡಂತೆ ಆಯಿತು ಎಂದು ಖುಷಿಪಟ್ಟ ಬದ್ರಿನಾಥ್, ಓಡಿ ಪೊಲೀಸ್ ಠಾಣೆಗೆ ಬಂದು ಅತ್ತವರಂತೆ ನಟಿಸುತ್ತಾ, ಅಪರಿಚಿತರು ಗುಂಡು ಹಾರಿಸಿ ಹೋಗಿರುವ ವಿಷಯ ತಿಳಿಸಿದ್ದಾನೆ. 'ನಾನು ನಾಲ್ವರಿಂದ ಸಾಲ ಪಡೆದಿದ್ದೇನೆ. ಹಣ ವಾಪಸ್ ನೀಡುವಂತೆ ನಿರಂತರವಾಗಿ ಅವರು ಒತ್ತಡ ಹೇರುತ್ತಿದ್ದರು. ಅದೇ ಕಾರಣಕ್ಕೆ ನನ್ನ ಮೇಲೆ ಗುಂಡು ಹಾರಿಸಲು ಮುಂದಾಗಿದ್ದರು, ಅದು ನನ್ನ ಪತ್ನಿಗೆ ತಗುಲಿತು' ಎಂದು ಹೇಳಿದ ಬದ್ರಿನಾಥ್. ಮುಂದಿನಿಂದ ಬಂದು ಗುಂಡು ಹಾರಿಸಿದರು ಎಂದ. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಗುಂಡು ಹಿಂದಿನಿಂದ ತಗುಲಿರುವುದು ಪೊಲೀಸರಿಗೆ ತಿಳಿಯಿತು.
ಅಷ್ಟೇ ಅಲ್ಲದೇ, ತನಿಖೆ ವೇಳೆ ಕೆಲ ದಿನಗಳ ಹಿಂದಷ್ಟೇ ಪತ್ನಿಯ ಹೆಸರಿಗೆ ವಿಮೆ ಮಾಡಿಸಿರುವುದು ಪೊಲೀಸರ ಗಮನಕ್ಕೆ ಬಂದಿದೆ. ತಾನು ಯಾರಿಂದ ಸಾಲ ಪಡೆದಿದ್ದೆ ಎಂದು ಈತ ಹೇಳಿದ್ದನೋ ಅವರ ಫೋನ್ ಕಾಲ್ಗಳನ್ನು ಪರಿಶೀಲಿಸಿದಾಗ, ಅವರು ಘಟನೆ ನಡೆದ ಜಾಗದಲ್ಲಿ ಇರಲಿಲ್ಲ ಎನ್ನುವುದು ಪೊಲೀಸರಿಗೆ ತಿಳಿದು ಅನುಮಾನ ಇನ್ನಷ್ಟು ಬಲವಾಗಿದೆ. ನಂತರ ಬದ್ರಿನಾಥನ ಫೋನ್ನಿಂದ ಇಬ್ಬರು ವ್ಯಕ್ತಿಗಳಿಗೆ ಪದೇ ಪದೇ ಕರೆ ಹೋಗಿರುವುದು ಕಂಡಿದೆ. ಅದನ್ನು ಪತ್ತೆ ಮಾಡಿ ಆ ಕರೆ ಹೋದ ವ್ಯಕ್ತಿಗಳನ್ನು ವಶಕ್ಕೆ ಪಡೆದಾಗ ಅವರೇ ತಾವು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ನಂತರ ಗಂಡನನ್ನು ಪೊಲೀಸರು ಅರೆಸ್ಟ್ ಮಾಡಿ ಬಾಯಿ ಬಿಡಿಸಿದಾಗ ನಡೆದಿರುವ ಘಟನೆಯನ್ನು ವಿವರಿಸಿದ್ದಾನೆ. ಇಂಟರ್ನೆಟ್ನಲ್ಲಿ ವಿಡಿಯೋ ನೋಡಿ ಪತ್ನಿಯನ್ನು ಕೊಲ್ಲಲು ಯೋಜನೆ ರೂಪಿಸಿದ್ದೆ ಎಂದೂ ಹೇಳಿದ್ದಾನೆ. ಮಹಿಳೆಯನ್ನು ಕೊಲ್ಲಲು ಅಜಯ್ ಅಲಿಯಾಸ್ ಗೋಲು, ಶಾಕೀರ್ ಮತ್ತು ಹುನಾರ್ ಸಿಂಗ್ ಸಹಕರಿಸಿರುವುದು ತಿಳಿದುಬಂದಿದೆ. ಬದ್ರಿಪ್ರಸಾದ್ ಮತ್ತು ಹುನಾರ್ ಸಿಂಗ್ ಅವರನ್ನು ಬಂಧಿಸಿದ್ದಾರೆ. ಉಳಿದವರು ತಪ್ಪಿಸಿಕೊಂಡಿದ್ದು, ಶೋಧ ಕಾರ್ಯ ಮುಂದುವರೆಸಿದ್ದಾರೆ. (ಏಜೆನ್ಸೀಸ್)