

ತಿರುವನಂತಪುರ: ಕೇರಳದ ಡಿಸಿ ಬುಕ್ಸ್ ರಾಜ್ಯಾದ್ಯಂತ ಆನ್‌ಲೈನ್ ರಾಮಾಯಣ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿತ್ತು. ಕಳೆದ ಜುಲೈ 23 ರಿಂದ 25 ರ ವರೆಗೆ ಈ ಸ್ಪರ್ಧೆ ನಡೆದಿತ್ತು. ಇದರಲ್ಲಿ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಆದರೆ ಇದರಲ್ಲಿ ಅಗ್ರಸ್ಥಾನ ಪಡೆದಿರುವುದು ಇಬ್ಬರು ಮುಸ್ಲಿಂ ಯುವಕರು.
ಕೇರಳದ ಮಲಪ್ಪುರಂ ಮೂಲದ ವಲಾಂಚೇರಿಯ ಕೆ.ಕೆ.ಎಚ್.ಎಂ ಇಸ್ಲಾಮಿಕ್ ಮತ್ತು ಕಲಾ ಕಾಲೇಜಿನಲ್ಲಿ ವಾಫಿ ಕೋರ್ಸ್‌ನ (ಇಸ್ಲಾಮಿಕ್ ಅಧ್ಯಯನ) ವಿದ್ಯಾರ್ಥಿಗಳಾದ ಮೊಹಮ್ಮದ್ ಜಬೀರ್ ಪಿ.ಕೆ ಹಾಗೂ ಮೊಹಮ್ಮದ್ ಬಸಿತ್ ಅಗ್ರಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸಮಾಜಶಾಸ್ತ್ರದಲ್ಲಿ ಬಿ.ಎ ಮುಗಿಸಿರುವ ಮೊಹಮ್ಮದ್ ಜಬೀರ್ ಅಂತಿಮ ವರ್ಷದ ವಾಫಿ ಸ್ನಾತ್ತಕೋತ್ತರ ವಿದ್ಯಾರ್ಥಿಯಾಗಿದ್ದಾರೆ. ಎರಡನೇ ವಿಜೇತ ಮೊಹಮ್ಮದ್ ಬಸಿತ್ 5ನೇ ವರ್ಷದ ವಾಫಿ ವಿದ್ಯಾರ್ಥಿಯಾಗಿದ್ದಾರೆ.
ತಮ್ಮ ಈ ಸಾಧನೆಗೆ ವಾಫಿ ಕೋರ್ಸ್ ಕಾರಣ ಎನ್ನುವುದು ಈ ಯುವಕರ ಮಾತು. (ವಾಫಿ ಕೋರ್ಸ್ ಎಂಬುದು ಎಂಟು ವರ್ಷಗಳ ಇಸ್ಲಾಮಿಕ್ ಅಧ್ಯಯನ. ಇದು ಮೂರು ವರ್ಷಗಳ ವಿಶ್ವವಿದ್ಯಾಲಯದ ಪದವಿ ಕೋರ್ಸನ್ನೂ ಒಳಗೊಂಡಿದೆ). ಈ ಕುರಿತು ಮಾತನಾಡಿರುವ ಮೊಹಮ್ಮದ್ ಜಬೀರ್, ನಾನು ವಾಫಿ ಪಠ್ಯಕ್ರಮದಲ್ಲಿ ಭಾರತೀಯ ಧರ್ಮಗಳಾದ ಹಿಂದೂ, ಬೌದ್ಧ, ಜೈನ ಹಾಗೂ ಸಿಖ್ ಧರ್ಮದ ಕುರಿತಾದ ವಿಷಯಗಳನ್ನು ಅಧ್ಯಯನಕ್ಕೆ ಆಯ್ದುಕೊಂಡಿದ್ದೆ. ಈ ಕೋರ್ಸ್‌ನ ಇತರ ಭಾಗಗಳಲ್ಲಿ ಕ್ರೈಸ್ತ, ಜುದಾಯಿಸಂ ಹಾಗೂ ಟಾವೊ ಧರ್ಮದ ಕುರಿತಾದ ವಿಷಯಗಳೂ ಇವೆ. ಆದ್ದರಿಂದ ನನಗೆ ರಾಮಾಯಣದಲ್ಲಿ ಗೆಲುವು ಸಾಧ್ಯವಾಯಿತು. ರಸಪ್ರಶ್ನೆಗೆ ಸಂಬಂಧಿಸಿದಂತೆ ಯಾವುದೇ ದೊಡ್ಡ ಮಟ್ಟದ ಸಿದ್ಧತೆಗಳನ್ನು ನಾನು ಮಾಡಿಕೊಂಡಿರಲಿಲ್ಲ ಎಂದಿದ್ದಾರೆ.
ಇವರ ಸಾಧನೆಗೆ ಎಲ್ಲೆಡೆಯಿಂದ ಶ್ಲಾಘನೆಗಳ ಮಹಾಪೂರ ಹರಿದುಬಂದಿದೆ. (ಏಜೆನ್ಸೀಸ್)