ಸ್ವೀಟ್​ ಪ್ರಿಯರೇ, ತಿನಿಸು ತಿನ್ನುವಾಗ ಇರಲಿ ಎಚ್ಚರ: ವ್ಯಕ್ತಿಯ ಪ್ರಾಣವನ್ನೇ ತೆಗೆದ ಕೇರಳ ಹಲ್ವಾ!

halwa
Published on

ಚೆರುಪುಲ್ಲಿ (ಕೇರಳ): ಸ್ವೀಟ್​ ಎಂದರೆ ಅನೇಕ ಮಂದಿಗೆ ಪ್ರೀತಿ. ಹಾಗೆಂದು ಇಷ್ಟದ ತಿನಿಸು ಸಿಕ್ಕಿತೆಂದು ಗಡಿಬಿಡಿಯಿಂದ ತಿಂದುಬಿಟ್ಟರೆ ಅದು ಪ್ರಾಣಕ್ಕೇ ಮುಳುವಾದೀತು ಜೋಕೆ! ಇಂಥದ್ದೇ ಒಂದು ಘಟನೆ ಕೇರಳದಲ್ಲಿ ನಡೆದಿದೆ.

ಕೇರಳದ ಹಲ್ವಾ ತುಂಬಾ ಜನರಿಗೆ ಅಚ್ಚುಮೆಚ್ಚು. ಕೇರಳ ಈ ಹಲ್ವಾಕ್ಕೆ ಫೇಮಸ್​ ಕೂಡ. ಅಂಟುಅಂಟಾಗಿರುವ ಈ ಹಲ್ವಾ ತಿಂದು ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿದ್ದಾರೆ. ಕೇರಳದ ಥಾಮರಾ ಮುಕ್ಕುವಿನ ಚೆರುಪುಲ್ಲಿ ಪರಂಬುವಿನ ನಿವಾಸಿ, 49 ವರ್ಷದ ನಿಜಾರ್ ಅವರ ಪ್ರಾಣಕ್ಕೆ ಮುಳುವಾಗಿದೆ ಈ ಹಲ್ವಾ.

ಆಗಿದ್ದೇನೆಂದರೆ, ಇವರಿಗೆ ಕೇರಳ ಹಲ್ವಾ ತುಂಬಾ ಇಷ್ಟ. ಮನೆಗೆ ಇದನ್ನು ತಂದ ಅವರು ಬಹುದಿನಗಳ ತಮ್ಮ ಆಸೆ ಈಡೇರಿತು ಎಂದುಕೊಂಡು ಈ ಹಲ್ವಾವನ್ನು ಗಡಿಬಿಡಿಯಿಂದ ತಿಂದುಬಿಟ್ಟಿದ್ದಾರೆ. ಅಂಟುಅಂಟಾಗಿರುವ ಈ ಹಲ್ವಾ ಅವರ ಶ್ವಾಸನಾಳದಲ್ಲಿ ಸಿಲುಕಿಬಿಟ್ಟಿದೆ.

ಇದರಿಂದ ಅವರಿಗೆ ಉಸಿರಾಡಲು ಸಾಧ್ಯವಾಗಲಿಲ್ಲ. ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನ ಆಗಲಿಲ್ಲ. ಶ್ವಾಸನಾಳದಲ್ಲಿ ಅದು ಸಿಲುಕಿ, ಅಲ್ಲಿಯೇ ಅಂಟುಕೊಂಡು ಮುಂದಕ್ಕೆ ಹೋಗದ ಹಿನ್ನೆಲೆಯಲ್ಲಿ ಅವರು ಪ್ರಾಣ ಕಳೆದುಕೊಂಡಿದ್ದಾರೆ.

ಸ್ಥಳೀಯ ಕಾರ್ಖಾನೆಯೊಂದರಲ್ಲಿ ನಿಜಾರ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ತಮ್ಮ ಕಂಪೆನಿ ಬಳಿ ಇದ್ದ ಬೇಕರಿಗೆ ಹೋಗಿ ಹಲ್ವಾ ಖರೀದಿಸಿ ತಿಂದಿದ್ದರು. ಕೂಡಲೇ ಹಲ್ವಾ ಗಂಟಲಿಗೆ ಸಿಲುಕಿ ಉಸಿರು ಕಟ್ಟಿದಂತೆ ಆಗಿದೆ. ಕೂಡಲೇ ಅಸ್ವಸ್ಥಗೊಂಡ ನಿಜಾಕರ್ ಅಲ್ಲೇ ಕುಸಿದು ಬಿದ್ದು ಒದ್ದಾಡತೊಡಗಿದರು. ಸ್ಥಳೀಯರು ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನ ಆಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಶ್ವಾಸನಾಳದಲ್ಲಿ ಹಲ್ವಾ ಸಿಲುಕಿ ಮೃತಪಟ್ಟಿದ್ದಾರೆಂದು ಮರಣೋತ್ತರ ವರದಿಯಲ್ಲಿ ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net