ಪ್ರೇಯಸಿಯ ಗಂಡನ ರುಂಡ, ಕೈ-ಕಾಲು ಕತ್ತರಿಸಿ ಭೀಕರ ಕೊಲೆ- ಸಿನಿಮಾನೇ ತನಗೆ ಸ್ಫೂರ್ತಿ ಎಂಬ ಪಾತಕಿ!

murder
Published on

ರಾಮಗೊಂಡಂ (ಹೈದರಾಬಾದ್): ಆಸ್ಪತ್ರೆಯಲ್ಲಿ ವಿವಾಹಿತೆಯೊಬ್ಬಳ ಜತೆ ಅಕ್ರಮ ಸಂಬಂಧ ಹೊಂದಿದ ಸ್ವೀಪರ್‌ ಒಬ್ಬ, ಆಕೆಯ ಗಂಡನ ರುಂಡ, ಮುಂಡ, ಕೈ-ಕಾಲು ಪೀಸ್‌ ಪೀಸ್‌ ಮಾಡಿ ಒಂದೊಂದು ಕಡೆ ಬೀಸಾಕಿ ಭಯಾನಕವಾಗಿ ಮರ್ಡರ್‌ ಮಾಡಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ತನ್ನ ಈ ಕೃತ್ಯಕ್ಕೆ ಸಿನಿಮಾನೇ ಸ್ಫೂರ್ತಿ ಎಂದು ಪೊಲೀಸರ ವಿಚಾರಣೆ ವೇಳೆ ಆತ ಹೇಳಿದ್ದಾನೆ. ಇಂಥದ್ದೊಂದು ದುಷ್ಕೃತ್ಯ ಎಸಗಿರುವವನ ಹೆಸರು ಪಿ. ರಾಜು. ಈತ ರಾಮಗೊಂಡಂನ ಎನ್‍ಟಿಪಿಸಿ ಆಸ್ಪತ್ರೆಯಲ್ಲಿ ಸ್ವೀಪರ್ ಕೆಲಸ ಮಾಡುತ್ತಿದ್ದ, ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 31 ವರ್ಷದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ.

ಈ ವಿಷಯ ಮಹಿಳೆಯ ಗಂಡ ಶಂಕರ್‌ಗೆ ಗೊತ್ತಾಗಿ ದಂಪತಿ ನಡುವೆ ಜಗಳವಾಗಿದೆ. ಇದರಿಂದ ಆತ ತನಗೆ ನಿತ್ಯವೂ ಕಿರುಕುಳ ಕೊಡುತ್ತಿರುವುದಾಗಿ ಮಹಿಳೆ ಈ ಪ್ರಿಯಕರನಲ್ಲಿ ಹೇಳಿಕೊಂಡಿದ್ದಾಳೆ. ಆದ್ದರಿಂದ ಇಬ್ಬರೂ ಸೇರಿ ಶಂಕರ್‌ನನ್ನು ಮುಗಿಸುವ ಪ್ಲ್ಯಾನ್‌ ಮಾಡಿದ್ದಾರೆ.

ಅದೇ ರೀತಿ ಶಂಕರ್ ಕೆಲಸದ ನಿಮಿತ್ತ ಹೊರಗಡೆ ಹೋದಾಗ ಆತನನ್ನು ಭಯಾನಕವಾಗಿ ಕೊಲೆ ಮಾಡಿ ಒಂದೊಂದು ಪಾರ್ಟ್‌ ಒಂದೊಂದು ಕಡೆ ಬೀಸಾಕಿದ್ದಾನೆ. ತಮ್ಮ ಮಗ ನಾಪತ್ತೆಯಾಗಿರುವುದಾಗಿ ದೂರಿ ಶಂಕರ್‌ ಪಾಲಕರು ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಒಂದು ಜಾಗದಲ್ಲಿ ಶಂಕರ್‌ ಅವರ ರುಂಡ ಸಿಕ್ಕಿದೆ. ಈ ಬಗ್ಗೆ ಅವರು ಪಾಲಕರಲ್ಲಿ ಹೇಳಿದಾಗ ಅವರಿಗೆ ಸೊಸೆಯ ಮೇಲೆ ಸಂಶಯ ಬಂದಿದೆ.

ನಂತರ ಬಾಯಿ ಬಿಡಿಸಿದಾಗ ಕೊಲೆ ಮಾಡಿರುವ ಬಗ್ಗೆ ಆಕೆ ಹೇಳಿದ್ದಾಳೆ. ವಿಷಯ ತಿಳಿಯುತ್ತಲೇ ರಾಜು ಪರಾರಿಯಾಗಲು ಯತ್ನಿಸಿದ್ದ. ಕೊನೆಗೆ ಆತನನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇಂಥ ಭೀಕರ ಕೊಲೆ ಮಾಡಲು ಸಿನಿಮಾನೇ ತನಗೆ ಸ್ಫೂರ್ತಿ ಎಂದು ಹೇಳಿದ್ದಾನೆ. ಶಂಕರ್ ಅವರ ಶರೀರದ ಎಲ್ಲಾ ಭಾಗಗಳನ್ನು ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net