

ಮುಂಬೈ: ಖತರ್ನಾಕ್ ಯುವತಿಯರ ಜಾಲಕ್ಕೆ ಬಿದ್ದು ಸರ್ವಸ್ವರನ್ನೂ ಕಳೆದುಕೊಳ್ಳುತ್ತಿರುವ ಯುವಕರಿಗಂತೂ ಲೆಕ್ಕವೇ ಇಲ್ಲ. ಅದರಲ್ಲಿಯೂ ಸುಶಿಕ್ಷಿತರು ಎನಿಸಿಕೊಂಡಿರುವ ಟೆಕ್ಕಿಗಳೇ ಯುವತಿಯರ ಜಾಲದಲ್ಲಿ ಬೀಳುತ್ತಿರುವ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸುದ್ದಿಯಾಗುತ್ತಿದೆ. ಇಂಥ ಸುದ್ದಿಗಳು ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದ್ದರೂ ಅಂದದ ಮೊಗ ನೋಡಿ ಅವರು ಕರೆದಲ್ಲಿಗೆ ಹೋಗುವವರಿಗೇ ಕಮ್ಮಿಯಾಗಿಲ್ಲ.
ಅಂಥದ್ದೇ ಒಂದು ಘಟನೆ ಮುಂಬೈನ ಘಾಟ್ಕೋಪರ್ ಬಳಿ ನಡೆದಿದೆ. ಡೇಟಿಂಗ್ ಆ್ಯಪ್ ಮೂಲಕ ಟೆಕ್ಕಿಯೊಬ್ಬನಿಗೆ ಗಾಳ ಹಾಕಿದ ಯುವತಿ ಆತನನ್ನು ಮನೆಗೆ ಕರೆದು ಮಾಡಿದ್ದೇ ಬೇರೆ!
ತನ್ನನ್ನು ದೀಪಾಲಿ ಜೈನ್ ಎಂದು ಪರಿಚಯಮಾಡಿಕೊಂಡ ಯುವತಿಯೊಬ್ಬಳು ಈ ಸಾಫ್ಟ್‌ವೇರ್ ಇಂಜಿನಿಯರ್‌ನನ್ನು ಡೇಟಿಂಗ್ ಆ್ಯಪ್‌ನಲ್ಲಿ ಮೋಡಿ ಮಾಡಿದ್ದಾಳೆ. ಚಾಟ್ ಮೂಲಕ ಆತನನ್ನು ಸಂಪೂರ್ಣ ತನ್ನ ವಶಕ್ಕೆ ಪಡೆದುಕೊಂಡಿದ್ದಾಳೆ. ಅವಳ ಸೌಂದರ್ಯ, ಅವಳ ಮುದ್ದುಮುದ್ದು ಮಾತು ಕೇಳಿ ಮರುಳಾದ ಈ ಸುಶಿಕ್ಷಿತ, ಅವಳು ಕರೆದಲ್ಲಿ ಹೋಗಲು ರೆಡಿಯಾಗಿದ್ದಾನೆ.
ಅವಳು ತನ್ನ ಮನೆಗೆ ಕರೆದಿದ್ದಾಳೆ. ಇವನು ಸುಂದರ ಕನಸು ಕಾಣುತ್ತಾ ಅವಳ ಮನೆಗೆ ಹೋಗಿದ್ದಾನೆ. ಈತ ಬರುತ್ತಿದ್ದಂತೆಯೇ ಸಮೀಪ ಹೋದ ಆ ಸುಂದರಿ ಈತ ಬರುವುದನ್ನೇ ಕಾಯುತ್ತಿದ್ದಳು ಎಂಬಂತೆ ಬಂದ ತಕ್ಷಣ ಬಾಗಿಲು ಹಾಕಿಕೊಂಡಿದ್ದಾಳೆ.
ನಂತರ ಅವನ ಜತೆ ಏನು ಬೇಕೋ ಎಲ್ಲವನ್ನೂ ಮಾಡಿದ್ದಾಳೆ. ಈತ ಈ ಭೂಮಿಯ ಮೇಲೆ ಬಂದಾಗಲೇ ತಿಳಿದದ್ದು, ಅಲ್ಲಿ ಇಂಥದ್ದೇ ಇನ್ನೂ ನಾಲ್ಕು ಮಂದಿ ಸುಂದರಿಯರು ಅದೇ ಕೋಣೆಯಲ್ಲಿದ್ದು, ಇವರ ಕೃತ್ಯಗಳನ್ನೆಲ್ಲಾ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರೆಂದು! ಆಗಲೇ ಗೊತ್ತಾದದ್ದು ತಾನು ಮೋಸ ಹೋಗಿದ್ದೇನೆ ಎಂದು.
ಇದೇ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿದ ಸುಂದರಿ ಈತನಿಂದ ಆರು ಲಕ್ಷ ರೂಪಾಯಿ ಕಿತ್ತುಕೊಂಡಿದ್ದಾಳೆ. ಇಷ್ಟು ದುಡ್ಡು ಪಡೆದುಕೊಂಡರೂ ಬೇಡಿಕೆ ಹೆಚ್ಚುತ್ತಲೇ ಹೋದ ಕಾರಣ, ಬೇರೆ ದಾರಿ ಕಾಣದ ಇಂಜಿನಿಯರ್ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾನೆ. ದುಡ್ಡು ಕೊಡದಿದ್ದರೆ ಅತ್ಯಾಚಾರದ ಪ್ರಕರಣ ದಾಖಲು ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ಹೆದರಿ ಪೊಲೀಸರ ಬಳಿ ಸತ್ಯವನ್ನು ಹೇಳಿದ್ದಾನೆ.
ತನಗೆ ಅವಳ ಪರಿಚಯವಾದದ್ದು, ಅವಳ ಮಾತು ಕೇಳಿ ತಾನು ಮರುಳಾದದ್ದು, ಅವಳ ಮನೆಗೆ ಹೋದದ್ದು, ಅಲ್ಲಿ ಇನ್ನೂ ಇಂಥದ್ದೇ ಯುವತಿಯರು ಇದ್ದದ್ದೂ ಎಲ್ಲವನ್ನೂ ಹೇಳಿದ್ದಾನೆ. ಇದೀಗ ಪೊಲೀಸರು ದೂರು ದಾಖಲು ಮಾಡಿಕೊಂಡು ಸುಂದರಿಯರಿಗಾಗಿ ಬಲೆಬೀಸಿ ಟೆಕ್ಕಿ ಹೇಳಿರುವ ಮನೆಯ ಮೇಲೆ ದಾಳಿ ನಡೆಸಿ ಯುವತಿಯನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಿದ್ದಾರೆ.