ಒಬ್ಬ ಬಾಲಕಿಯನ್ನು ಪ್ರೀತಿಸಿದ ಇಬ್ಬರು ಬಾಲಕರು: ಕೊಲೆಗೆ ಯತ್ನಿಸಿ ಸೆಲ್ಫಿ ತೆಗೆದುಕೊಂಡ ವಿದ್ಯಾರ್ಥಿಗಳು!

lovestory
Published on

ರಂಗಾರೆಡ್ಡಿ (ತೆಲಂಗಾಣ): ಒಬ್ಬ ಬಾಲಕಿಯನ್ನು ಇಬ್ಬರು ಬಾಲಕರು ಪ್ರೀತಿಸಿದ್ದರಿಂದ ಒಬ್ಬಾತ ಇನ್ನೊಬ್ಬನ ಕೊಲೆಗೆ ಯತ್ನಿಸಿರುವ ಭಯಾನಕ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ರಾಜೇಂದ್ರ ನಗರದಲ್ಲಿ ನಡೆದಿದೆ. ಕೊಲೆಗೆ ಯತ್ನಿಸಿದ್ದೂ ಅಲ್ಲದೇ, ಅದರ ಸೆಲ್ಫಿ ಕೂಡ ಮಾಡಿಕೊಂಡು ಈಗ ಪೊಲೀಸರ ಅತಿಥಿಯಾಗಿದ್ದಾರೆ!

ಇಂಥದ್ದೊಂದು ಕೃತ್ಯ ಎಸಗಿದವರು ಪ್ರಥಮ ಪಿಯುಸಿ ಓದುತ್ತಿರುವ ವಿದ್ಯಾರ್ಥಿ. ಈತ ಬಾಲಕಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇವನದ್ದೇ ಕ್ಲಾಸ್​ಮೇಟ್​ ಒಬ್ಬ ಅವಳನ್ನೇ ಪ್ರೀತಿಸುತ್ತಿದ್ದ. ಇದನ್ನು ತಿಳಿದ ವಿದ್ಯಾರ್ಥಿ ತನ್ನ ಇನ್ನೊಬ್ಬ ಕ್ಲಾಸ್​ಮೇಟ್​ ಜತೆಗೂಡಿ ಕೊಲೆ ಸ್ಕೆಚ್​ ಹಾಕಿದ್ದಾನೆ!

ಪಾರ್ಟಿ ಮಾಡುವ ಎಂದು ಕರೆದು ಹಲ್ಲೆ!

ಪಾರ್ಟಿ ಮಾಡುವ ನೆಪದಲ್ಲಿ ಬಾಲಕಿಯನ್ನು ಪ್ರೀತಿಸುತ್ತಿದ್ದ ಇನ್ನೊಬ್ಬನನ್ನು ಕರೆಸಿಕೊಂಡ ಬಾಲಕ, ತನ್ನ ಸ್ನೇಹಿತನ ಜತೆಗೂಡಿ ಕಾಲುವೆಗೆ ಕರೆದೊಯ್ದಿದ್ದಾನೆ. ನಂತರ ಇಬ್ಬರೂ ಸೇರಿ ಚಾಕುವಿನಿಂದ ಹಲ್ಲೆ ನಡೆಸಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಹಲ್ಲೆಗೊಳಗಾದ ಬಾಲಕ ಜೋರಾಗಿ ಕೂಗಿಕೊಳ್ಳುತ್ತಿದ್ದಂತೆಯೇ ಹೆದರಿ ಪರಾರಿಯಾಗಿದ್ದಾರೆ.

ಕೂಡಲೇ ಅಲ್ಲಿಂದ ಓಡಿಹೋದ ಹಲ್ಲೆಗೊಳಗಾದ ಬಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಬಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಿದ ಪೊಲೀಸರು ತನಿಖೆ ಕೈಗೊಂಡು ಹಲ್ಲೆ ಮಾಡಿದ ಇಬ್ಬರು ಬಾಲಕರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಿದಾಗ ತಾವು ಏಕೆ ಈ ಕೃತ್ಯ ಮಾಡಿದ್ದು ಎಂದು ಅವರು ತಪ್ಪು ಒಪ್ಪಿಕೊಂಡಿದ್ದಾರೆ. ವಿಚಾರಣೆ ಮುಂದುವರೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net