

ಬೆಂಗಳೂರು: ಕರೊನಾ ವೈರಸ್ನ ಎರಡನೆಯ ಅಲೆ ಇದೀಗ ಭಾರಿ ಸುದ್ದಿ ಮಾಡುತ್ತಿದೆ. ಇನ್ನಿಲ್ಲದಂತೆ ಬಂದು ಎರಗಿರುವ ಈ ಮಹಾಮಾರಿಯಿಂದಾಗಿ ಇದಾಗಲೇ ಕೆಲ ರಾಜ್ಯಗಳಲ್ಲಿ ಪುನಃ ಲಾಕ್ಡೌನ್ ಜಾರಿಗೊಳಿಸಲಾಗಿದೆ.
ಕರ್ನಾಟಕದಲ್ಲಿಯೂ ಪುನಃ ಲಾಕ್ಡೌನ್ ಜಾರಿಯಾಗುವ ಎಲ್ಲಾ ಸಾಧ್ಯತೆ ಇದೆ ಎಂಬ ಮಾತು ಇದಾಗಲೇ ಕೇಳಿಬರುತ್ತಿದೆ. ಇದರ ನಡುವೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಲಾಕ್ಡೌನ್ ಕುರಿತಂತೆ ಎಚ್ಚರಿಕೆಯ ಮಾತುಗಳನ್ನು ನೀಡಿದ್ದಾರೆ.
ಲಾಕ್ಡೌನ್ ಕುರಿತಂತೆ ನಾಳೆ ಯಡಿಯೂರಪ್ಪನವರು ನಾಳೆ ಸಭೆ ಕರೆಯಲಿದ್ದು, ಈ ಕುರಿತಂತೆ ಮಾಧ್ಯಮದವರ ಜತೆ ಇಂದು ಅವರು ಮಾತನಾಡಿದರು.
ಕರೊನಾ ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್ ಬೇಡವೆಂದಾದರೆ ಜನರು ನಿಯಮಗಳನ್ನು ಪಾಲಿಸಲೇಬೇಕಿದೆ ಎಂದು ಹೇಳಿದರು. ಸೋಂಕು ಮಾರಿ ಉಲ್ಬಣಿಸುವುದನ್ನು ತಡೆಯಲು ಬಿಗಿ ಕ್ರಮ ಅನಿವಾರ್ಯವಾಗಿದೆ. ಆದ್ದರಿಂದ ಜನರು ನಿಯಮಗಳನ್ನು ಪಾಲಿಸದೇ ಹೋದರೆ ಎಲ್ಲವೂ ಅನಿವಾರ್ಯ ಆಗಲಿದೆ ಎಂದರು.
ಈಗಾಗಲೇ ಮುಖ್ಯ ಕಾರ್ಯದರ್ಶಿ ಜತೆಗೆ ಚರ್ಚಿಸಿ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ಅಭಿಪ್ರಾಯಗಳನ್ನು ಪಡೆದಿರುವೆ. ಸೋಮವಾರದ ಸಭೆಯಲ್ಲಿ ತಜ್ಞರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಜತೆಗೆ ಸಮಾಲೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
ಜನರ ಹಿತದೃಷ್ಟಿಯಿಂದ ಈಗಾಗಲೇ ಜಾರಿಗೊಳಿಸಿರುವ ಮಾರ್ಗಸೂಚಿಗಳ ಜಾರಿ, ಜನರ ಸ್ಪಂದನೆ ಕುರಿತು ಪರಾಮರ್ಶಿಸುವೆ ಎಂದು ಮುಖ್ಯಮಂತ್ರಿ ತಿಳಿಸಿದರು.