ಬೆಂಗಳೂರಿಗೆ ಬಂದಿಳಿಯಲಿದೆ ವಿಶ್ವದ ಅತಿ ದೊಡ್ಡ ವಿಮಾನ: ಏನಿದರ ವಿಶೇಷತೆ ನೋಡಿ...

vimana
Published on

ಬೆಂಗಳೂರು: ವಿಶ್ವದ ಅತಿ ದೊಡ್ಡ ವಿಮಾನ ಏರ್‌ಬಸ್‌ ಎ-380 ಸೂಪರ್‌ಜಂಬೋ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರುವ ಅಕ್ಟೋಬರ್​ 30ರಂದು ಲ್ಯಾಂಡ್‌ ಆಗಲಿದೆ. ಇದರಿಂದ ಇನ್ನು ದುಬೈ - ಬೆಂಗಳೂರು ನಡುವೆ ನೇರ ವಿಮಾನಯಾನ ಸೇವೆ ಆರಂಭವಾದಂತಾಗಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅತಿ ದೊಡ್ಡ ಏರ್ ಬಸ್ ಭೂಸ್ವರ್ಶ ಮಾಡಲಿದೆ.

ಒಟ್ಟು 72.75 ಮೀಟರ್‌ ಉದ್ದ, 24.45 ಮೀಟರ್‌ ಎತ್ತರ ಹೊಂದಿರುವ ಈ ವಿಮಾನದಲ್ಲಿ ಒಂದು ಬಾರಿ ಗರಿಷ್ಠ 853 ಮಂದಿ ಪ್ರಯಾಣಿಸಬಹುದಾಗಿದೆ. ಒಂದು ಬಾರಿಗೆ 3 ಸಾವಿರ ಸೂಟ್‌ಕೇಸ್‌ಗಳನ್ನು ತೆಗದುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದೆ.

ಈ ಕುರಿತು ಯುಎಇ ವಿಮಾನಯಾನ ಸಂಸ್ಥೆ ಎಮಿರೇಟ್ಸ್‌ ಹೇಳಿಕೆ ಬಿಡುಗಡೆ ಮಾಡಿದೆ. ಅಕ್ಟೋಬರ್‌ 30 ರಿಂದ ಪ್ರತಿನಿತ್ಯ ಬೆಂಗಳೂರಿನಿಂದ ದುಬೈಗೆ ಸೇವೆ ನೀಡಲಾಗುವುದು ಎಂದು ಅದು ತಿಳಿಸಿದೆ. ಎಮಿರೇಟ್ಸ್‌ ಸಂಸ್ಥೆಯ ಏರ್‌ಬಸ್‌ ಎ-380 ವಿಮಾನ ಲ್ಯಾಂಡ್‌ ಆಗುವ ಎರಡನೇ ನಿಲ್ದಾಣ ಬೆಂಗಳೂರು ಆಗಲಿದೆ. ಈ ಮೊದಲು 2014ರಲ್ಲಿ ಎಮಿರೇಟ್ಸ್‌ ಸಂಸ್ಥೆ ಮುಂಬೈನಿಂದ ದುಬೈಗೆ ಈ ಸೇವೆಯನ್ನು ನೀಡಿತ್ತು.

ದುಬೈನಿಂದ ಟೇಕ್ ಆಫ್ ಆದ ಏರ್ ಬಸ್ ಆಕ್ಟೋಬರ್ 30 ರಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದೆ. ಈ ಡಬ್ಬಲ್‌ ಡೆಕ್ಕರ್‌ ವಿಮಾನದಲ್ಲಿ ಮೂರು ದರ್ಜೆಯಲ್ಲಿ ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದೆ. ಎಕಾನಮಿ, ಬಿಸಿನೆಸ್‌, ಫಸ್ಟ್‌ ಕ್ಲಾಸ್‌ ಟಿಕೆಟ್‌ ಲಭ್ಯವಿದೆ.

ಬೋಯಿಂಗ್‌ 777 ಹೋಲಿಕೆ ಮಾಡಿದರೆ ಶೇ.45 ರಷ್ಟು ಹೆಚ್ಚು ಪ್ರಯಾಣಿಕರು ಈ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ. ವಿಶ್ವದ 30 ವಿಮಾನ ನಿಲ್ದಾಣಗಳಿಗೆ ಏರ್‌ಬಸ್‌ 380 ವಿಮಾನ ಸೇವೆಯನ್ನು ಎಮಿರೇಟ್ಸ್‌ ನೀಡುತ್ತಿದೆ. 1985ರಿಂದ ಎಮಿರೇಟ್ಸ್‌ ಭಾರತದಲ್ಲಿ ಸೇವೆ ನೀಡಲು ಆರಂಭಿಸಿದೆ.

2003 ರಲ್ಲಿ ಏರ್‌ಬಸ್‌ ಕಂಪನಿ ಈ ವಿಮಾನವನ್ನು ನಿರ್ಮಾಣ ಮಾಡಿದೆ. ಇಲ್ಲಿಯವರೆಗೆ 3 ಪರೀಕ್ಷಾರ್ಥ ವಿಮಾನ ಸೇರಿದಂತೆ ಒಟ್ಟು 254 ವಿಮಾನಗಳನ್ನು ಉತ್ಪಾದನೆ ಮಾಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net