

ಬೆಂಗಳೂರು: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ವೀರ್ ಸಾವರ್ಕರ್ ಮತ್ತು ನೆಹರೂ ಫೋಟೋ ವಿವಾದ ರಾಜಕೀಯ ತಿರುವು ಪಡೆದುಕೊಂಡು ಒಬ್ಬರ ಮೇಲೊಬ್ಬರು ಕೆಸರೆರೆಚಾಟ ಶುರು ಮಾಡಿದ್ದಾರೆ. ಇದು ಕೋಮು ಗಲಭೆಯನ್ನೂ ಸೃಷ್ಟಿಸುತ್ತಿದೆ. ಒಂದೆಡೆ ರಾಜ್ಯ ಸರ್ಕಾರ ನೀಡಿರುವ ಜಾಹೀರಾತಿನಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರ್ಲಾಲ ನೆಹರೂ ಅವರ ಫೋಟೋ ಕೈಬಿಟ್ಟಿರುವ ಕಿಡಿಯಾದರೆ, ಇನ್ನೊಂದೆಡೆ ವೀರ್ ಸಾವರ್ಕರ್ ಅವರ ಫೋಟೋದಿಂದ ಕೆಲ ಊರುಗಳಲ್ಲಿ ಕೋಮು ಗಲಭೆ ಸೃಷ್ಟಿಯಾಗಿದೆ.
ಇದರ ನಡುವೆಯೇ ಜೈಲಿನ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಜೈಲಿನ ಫೋಟೋದಲ್ಲಿ ಒಂದು ವೀರ್ ಸಾವರ್ಕರ್ ಅವರು ಇದ್ದ ಜೈಲಿನ ಕೊಠಡಿಯ ಫೋಟೋ ಆಗಿದ್ದು, ಮತ್ತೊಂದು ನೆಹರೂ ಹಾಗೂ ಇನ್ನೊಂದು ಗಾಂಧಿ ಇದ್ದ ಜೈಲಿನ ಕೊಠಡಿಯ ಫೋಟೋ ಆಗಿದೆ. ಇವು ಮೂರಕ್ಕೂ ಹೋಲಿಕೆ ಮಾಡಲಾಗುತ್ತಿದೆ. ನೆಹರೂ ಮತ್ತು ಗಾಂಧಿಯವರಿಗೆ ಜೈಲಿನಲ್ಲಿ ಕೊಟ್ಟ ಐಷಾರಾಮಿ ಕೊಠಡಿ ಒಂದೆಡೆಯಾದರೆ ಇನ್ನೊಂದು ಫೋಟೋದಲ್ಲಿ ವೀರ್ ಸಾವರ್ಕರ್ ಅವರನ್ನು ಇಟ್ಟ ಯಾವ ಅನುಕೂಲವೂ ಇಲ್ಲದ ಗಲೀಜಿನಿಂದ ಕೂಡಿದ ಕೊಠಡಿಯ ಫೋಟೋ ತೋರಿಸಲಾಗುತ್ತಿದೆ. ನೆಹರೂ ಮತ್ತು ಗಾಂಧಿ ಇದ್ದ ಕೋಣೆ ನೋಡಿದರೆ ಅದು ಜೈಲು ಎಂದು ಯಾವುದೇ ದಿಕ್ಕಿನಿಂದಲೂ ಕಾಣಿಸುವುದಿಲ್ಲ, ಬದಲಿಗೆ ಐಷಾರಾಮಿ ಮನೆಯ ಕೋಣೆಯಂತೆ ಕಾಣಿಸುತ್ತಿದೆ.
ಈ ಫೋಟೋಗೆ ಥಹರೇವಾರಿ ಕಮೆಂಟ್ಗಳು ಬರುತ್ತಿವೆ. ಒಂದು ವರ್ಗ ಈ ಫೋಟೋ ಒಂದೇ ಸಾಕು, ನಿಜವಾದ ಸ್ವಾತಂತ್ರ್ಯ ಹೋರಾಟಗಾರರು ಯಾರು ಎಂದು ತೋರಿಸಲು ಎಂದು ಹೇಳುತ್ತಿದ್ದರೆ, ಇನ್ನೊಂದು ವರ್ಗ ಈ ಫೋಟೋ ನಕಲಿಯಾಗಿದ್ದು ಯಾರೂ ನಂಬಲು ಸಾಧ್ಯವಿಲ್ಲ ಎನ್ನುತ್ತಿದೆ. ಒಟ್ಟಿನಲ್ಲಿ ಈ ಫೋಟೋ ಈಗ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಇದು ಇಷ್ಟು ಸುದ್ದಿಯಾಗುತ್ತಲೇ ಈ ಫೋಟೋದ ಅಸಲಿಯತ್ತೇನು ಎಂದು ಸತ್ಯ ಶೋಧನೆ ಮಾಡುವ 'ಫ್ಯಾಕ್ಟಿ ಡಾಟ್ ಇನ್' ವೆಬ್ಸೈಟ್ ಸತ್ಯಾಂಶವನ್ನು ಹೊರಗೆಡವಿದೆ.
ಈ ವೆಬ್ಸೈಟ್ನಲ್ಲಿ ಹೇಳಿರುವ ಸತ್ಯಾಂಶ ಏನು?
ಮೂವರು ಇದ್ದ ಜೈಲಿನ ಫೋಟೋ ಎಂದು ಈಗ ವೈರಲ್ ಆಗುತ್ತಿರುವ ಫೋಟೋ ನಕಲಿಯಲ್ಲ, ಇದು ಅಸಲಿಯೇ ಎಂದು ಫ್ಯಾಕ್ಟ್ಚೆಕ್ನಲ್ಲಿ 'ಫ್ಯಾಕ್ಟಿ ಡಾಟ್ ಇನ್' (factly.in) ಹೇಳಿದೆ. ಕೆಟ್ಟಿದ್ದಾಗಿ ಇರುವ ಜೈಲಿನ ಕೋಣೆಯಲ್ಲಿ ಇದ್ದುದು ವೀರ್ ಸಾವರ್ಕರ್ ಹಾಗೂ ಐಷಾರಾಮಿ ಎಂದು ಹೇಳಲಾಗುತ್ತಿರುವ ಕೊಠಡಿಯಲ್ಲಿ ಇದ್ದುದು ನೆಹರೂ ಮತ್ತು ಗಾಂಧಿ ಎಂದು ಈ ವೆಬ್ಸೈಟ್ನಿಂದ ಬಹಿರಂಗಗೊಂಡಿದೆ.
1911-1921ರ ವರೆಗೆ ಸಾವರ್ಕರ್ ಅವರು ಇದ್ದ ಜೈಲು ಇದಾಗಿದ್ದರೆ, ಅಹಮದಾನಗರದ ಫೋರ್ಟ್ ಜೈಲಿನಲ್ಲಿ ನೆಹರೂ 1942-45ರವರೆಗೆ ಇದ್ದರು ಹಾಗೂ ಆಗಾ ಖಾನ್ ಪ್ಯಾಲೇಸ್ನಲ್ಲಿ ಗಾಂಧಿ 1942-44ರವರೆಗೆ ಇದ್ದ ಫೋಟೋ ಇವು ಎಂದು ಫ್ಯಾಕ್ಟ್ಚೆಕ್ನಿಂದ ತಿಳಿದುಬಂದಿದೆ.
ಸಾವರ್ಕರ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರಿಂದ ಅವರಿಗೆ 50 ವರ್ಷಗಳ ಜೈಲು ಶಿಕ್ಷೆ (ಡಬಲ್ ಜೀವಾವಧಿ ಶಿಕ್ಷೆ) ವಿಧಿಸಲಾಗಿತ್ತು. ಅದಕ್ಕೇ ಇಂಥ ಜೈಲಿನಲ್ಲಿ ಇರಿಸಲಾಗಿತ್ತು. (ಸಾವರ್ಕರ್ ಬರೆದಿದ್ದ ಒಂದೇ ಒಂದು ಪುಸ್ತಕಕ್ಕೆ ಬೆಚ್ಚಿಬಿದ್ದಿದ್ದ ಬ್ರಿಟಿಷರು ಅವರಿಗೆ, ಭೂಲೋಕದ ನರಕ ಎಂದೇ ಹೇಳಲಾಗುವ ಅಂಡಮಾನ್‌ನಲ್ಲಿ ಕರಿನೀರ ಶಿಕ್ಷೆ ವಿಧಿಸಿದ್ದರು. 13 ವರ್ಷ ಈ ಕರಾಳ ಲೋಕದಲ್ಲಿ ನಲುಗಿದ್ದರು ಸಾವರ್ಕರ್). ಆದರೆ ಗಾಂಧಿ ಅಥವಾ ನೆಹರೂ ಅವರಿಗೆ ಇಂಥ ಕಠಿಣ ಶಿಕ್ಷೆ ವಿಧಿಸಿರಲಿಲ್ಲ. ಅದಕ್ಕಾಗಿ ಅವರಿಗೆ ಒಳ್ಳೆಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದ್ದರಿಂದ ಈ ಫೋಟೋಗಳನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದು ಈ ಫ್ಯಾಕ್ಟ್ಚೆಕ್ ವೆಬ್ಸೈಟ್ ಹೇಳಿದೆ.