

ಪಟ್ನಾ: ಮೇವು ಹಗರಣ ಸೇರಿದಂತೆ ಕೆಲವು ಹಗರಣಗಳ ಸುಳಿಯಲ್ಲಿ ಸಿಲುಕಿ ಜೈಲುಪಾಲಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಇದೀಗ ಜೈಲಿನಿಂದಲೇ ಪಕ್ಷವನ್ನು ಕಂಟ್ರೋಲ್ ಮಾಡುತ್ತಿದ್ದಾರೆ.
ಇನ್ನೇನು ಬಿಹಾರ ಚುನಾವಣೆ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ಆರ್‌ಜೆಡಿ ಪಕ್ಷವನ್ನು ಜೈಲಿನಲ್ಲಿದ್ದುಕೊಂಡೇ ಬಲಪಡಿಸುವ ಕಾರ್ಯತಂತ್ರ ರೂಪಿಸಿರುವ ಲಾಲೂ, ಅಲ್ಲಿಂದಲೇ ಅಭ್ಯರ್ಥಿಗಳ ಆಯ್ಕೆಗೆ ಸಂದರ್ಶನ ನಡೆಸುತ್ತಿದ್ದಾರಂತೆ!
ಸದ್ಯ ಅನಾರೋಗ್ಯದ ಕಾರಣದಿಂದ ಅವರು ಜೈಲಿನ ನಿಗಾದಲ್ಲಿರುವ ರಾಂಚಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅಲ್ಲಿಂದಲೇ ತಮ್ಮ ಪಕ್ಷದ ಉಸ್ತುವಾರಿಯನ್ನು ಅವರು ನೋಡಿಕೊಳ್ಳುತ್ತಿದ್ದಾರೆ.
ಆ.5ರಂದು ಯಾದವ್ ಅವರನ್ನು ಆಸ್ಪತ್ರೆಯ ನಿರ್ದೇಶಕರ ಬಂಗಲೆಗೆ ಕರೆದೊಯ್ಯಲಾಗುತ್ತಿತ್ತು. ಅಲ್ಲಿಂದಲೇ ಸಂದರ್ಶನ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಆಗಸ್ಟ್ 5ರಂದು ಅವರನ್ನು ಜಾರ್ಖಂಡ್ ರಾಂಚಿಯಲ್ಲಿನ ರಿಮ್ಸ್‌ನ ಡೈರೆಕ್ಟರ್ಸ್ ಬಂಗಲೆಗೆ ವರ್ಗಾಯಿಸಲಾಗಿತ್ತು. ಅಲ್ಲಿ ಕುಳಿತೇ ಅವರು ಆರ್‌ಜೆಡಿಯಿಂದ ಚುನಾವಣೆಗೆ ಇಳಿಯಬೇಕಾದ ಸೂಕ್ತ ಅಭ್ಯರ್ಥಿಗಳ ಹುಡುಕಾಟಕ್ಕೆ ಸಂದರ್ಶನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಲಾಲು ಪ್ರಸಾದ್ ಅವರೇ ನಿರ್ಧರಿಸುತ್ತಿದ್ದಾರೆ. ಡೈರೆಕ್ಟರ್ಸ್ ಬಂಗಲೆಗೆ ಬಂದು ಅವರನ್ನು ನೇರವಾಗಿ ಭೇಟಿ ಮಾಡಿ ಸಂದರ್ಶನಕ್ಕೆ ಒಳಗಾಗುವವರಿಗೆ ಮಾತ್ರವೇ ಟಿಕೆಟ್ ಭರವಸೆ ನೀಡಲಾಗುತ್ತಿದೆ ಎಂದು ಲಾಲು ಪ್ರಸಾದ್ ಆಪ್ತ ವಲಯಗಳು ಹೇಳಿವೆ.
ಈ ಪ್ರಕ್ರಿಯೆಗೆ ಉಳಿದ ಪಕ್ಷಗಳು ಕಣ್ಣುಕೆಂಪಗೆ ಮಾಡಿವೆ. ಇದಕ್ಕೆ ಕಾರಣವೂ ಇದೆ. ಅದೇನೆಂದರೆ ಕಾರಾಗೃಹದಲ್ಲಿರುವವರಿಗೆ ಮೊಬೈಲ್ ಬಳಕೆ ನಿಷೇಧ. ಆದರೆ ಲಾಲೂ ಅವರಿಗೆ ಈ ಸೌಲಭ್ಯ ಹೇಗೆ ಸಿಕ್ಕಿತು ಎಂದು ಕಿಡಿ ಕಾರುತ್ತಿದ್ದಾರೆ ಉಳಿದವರು.
ಈ ಬಗ್ಗೆ ಹೇಳಿಕೆ ನೀಡಿರುವ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ರಘುವರ್ ದಾಸ್, ಜೈಲಿಗೆ ಕಳುಹಿಸಲಾಗಿರುವ ಅಪರಾಧಿಯೊಬ್ಬನಿಗೆ ರಾಜ್ಯ ಸರ್ಕಾರ ಮುಕ್ತ ಸ್ವಾತಂತ್ರ್ಯ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಇದು ಕಾನೂನು ಮತ್ತು ಸುವ್ಯವಸ್ಥೆಯ ಅಣಕ ಎಂದು ಟೀಕಿಸಿದ್ದಾರೆ.
ಈಗ ಅವರು ಚಿಕಿತ್ಸೆ ಪಡೆದಿರುವ ಆಸ್ಪತ್ರೆಯ ಅತಿ ಸುದೀರ್ಘಾವಧಿ ದಾಖಲಾದ ರೋಗಿ ಎಂದೆನಿಸಿಕೊಂಡಿದ್ದಾರೆ ಲಾಲೂ ಪ್ರಸಾದ್.. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ನೇತೃತ್ವದ ಜೆಎಂಎಂ-ಕಾಂಗ್ರೆಸ್ ಸರ್ಕಾರವು ಲಾಲುಗೆ ನೆರವು ನೀಡುತ್ತಿದೆ ಎಂದು ರಘುವರ್ ದಾಸ್ ಆರೋಪಿಸಿದ್ದಾರೆ. ಕಾಂಗ್ರೆಸ್‌ನ ಹಿರಿಯ ಮುಖಂಡರ ಜತೆ ಲಾಲು ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ.
ಲಾಲೂ ಪ್ರಸಾದಗೆ 2018ರಲ್ಲಿ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.