

ಹರಿಯಾಣ: ಪ್ರೀತಿ ಕುರುಡು ಎಂಬ ಹಳೆಯ ಮಾತು ಇದೆ. ಅಂಥದ್ದೇ ಒಂದು ಪ್ರಕರಣ ಇದೀಗ ಪಂಜಾಬ್- ಹರಿಯಾಣ ಹೈಕೋರ್ಟ್ ಮೆಟ್ಟಿಲೇರಿದ್ದು, ಖುದ್ದು ನ್ಯಾಯಮೂರ್ತಿಗಳೇ ಇಂಥ ಕುರುಡು ಪ್ರೀತಿಯ ಬಗ್ಗೆ ಅಚ್ಚರಿ ಪಟ್ಟುಕೊಂಡಿದ್ದಾರೆ.
ಅದೇನೆಂದರೆ 19 ವರ್ಷದ ವಿವಾಹಿತೆಯೊಬ್ಬಳು ತನ್ನ ಗಂಡನಿಗೆ ವಿಚ್ಛೇದನ ಕೊಡದೆ ಮನೆಯಿಂದ ಓಡಿ ಹೋಗಿ 67 ವರ್ಷದ ಅಜ್ಜ, ಏಳು ಮಕ್ಕಳ ತಂದೆಯನ್ನು ಮದುವೆಯಾಗಿರುವ ಕೇಸ್ ಇದು. ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಇರುವ ತಗಾದೆಯಲ್ಲಿ ಈ ಇಬ್ಬರೂ ಸಂಪರ್ಕಕ್ಕೆ ಬಂದಿದ್ದು, ಲವ್‌ಗೆ ಬಿದ್ದಿದ್ದಾರೆ. ಇದಾಗಲೇ ಯುವತಿಗೆ ಮದುವೆಯಾಗಿದ್ದರೆ, ಏಳು ಮಕ್ಕಳ ತಂದೆಯಾಗಿರುವ ಈ ಅಜ್ಜನ ಹೆಂಡತಿ ಸತ್ತುಹೋಗಿದ್ದಳು. ಯುವತಿ ಮೇಲೆ ಅಜ್ಜನಿಗೆ ಪ್ರೀತಿ ಹುಟ್ಟಿದ್ದರೆ, ಆ ಅಜ್ಜನ ಮೇಲೆ ಯುವತಿಗೆ ಪ್ರೀತಿ ಹುಟ್ಟಿದೆ.
ಈ ವ್ಯಕ್ತಿಯ ಏಳೂ ಮಕ್ಕಳಿಗೆ ಮದುವೆಯಾಗಿದ್ದು, ಹಲವಾರು ಮೊಮ್ಮಕ್ಕಳೂ ಇದ್ದಾರೆ. ಯುವತಿಗೆ ಅವನ ಮೇಲೆ ಪ್ರೀತಿ ಹೆಚ್ಚಾಗಿ ಗಂಡನನ್ನು ಬಿಟ್ಟು ಇವನನ್ನು ಮದುವೆಯಾಗಿದ್ದಾಳೆ. ಇದೀಗ ಯುವತಿಯ ಪಾಲಕರು ಕೇಸ್ ಹಾಕಿದ್ದಾರೆ. ಆದ್ದರಿಂದ ಈ ಜೋಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಯುವತಿಯ ಪಾಲಕರಿಂದ ರಕ್ಷಣೆ ಬೇಕು ಎಂದು ಕೋರಿದೆ. ಯುವತಿಗೆ ಕುಟುಂಬಸ್ಥರಿಂದ ಜೀವ ಬೆದರಿಕೆ ಇರುವುದಾಗಿ ಅರ್ಜಿಯಲ್ಲಿ ಹೇಳಲಾಗಿದೆ.
ಅರ್ಜಿಯನ್ನು ನೋಡಿ, ವಿಷಯ ತಿಳಿದುಕೊಂಡ ನ್ಯಾಯಮೂರ್ತಿಗಳೇ ಅಚ್ಚರಿ ಪಟ್ಟುಕೊಂಡಿದ್ದು, ಈ ಮದುವೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ. ಅವರಿಗೆ ಯಾವುದೇ ಹಾನಿ ಮಾಡಬಾರದು ಎಂದು ಕುಟುಂಬಸ್ಥರಿಗೆ ಕೋರ್ಟ್ ಸೂಚಿಸಿದ್ದರೂ, ಈ ಮದುವೆಯಾಗಿದ್ದು ಹೇಗೆ, ಯಾವ ಸಂದರ್ಭದಲ್ಲಿ ಎಂಬ ಬಗ್ಗೆ ತನಿಖೆ ಮಾಡುವಂತೆ ಪೊಲೀಸರಿಗೆ ಕೋರ್ಟ್ ನಿರ್ದೇಶಿಸಿದೆ.
ವಿಷಯದ ಗಂಭೀರತೆಯನ್ನು ಗಮನಿಸಿರುವ ಕೋರ್ಟ್, ಮಹಿಳಾ ಪೊಲೀಸರನ್ನು ಒಳಗೊಂಡ ತಂಡವನ್ನು ರಚಿಸುವಂತೆ ಪೊಲೀಸ್ ಅಧಿಕಾರಿಗೆ ಆದೇಶಿಸಿದೆ. ಹುಡುಗಿಗೆ ಭದ್ರತೆಯನ್ನು ಒದಗಿಸಬೇಕು. ಅಲ್ಲಿಯವರೆಗೆ ಈ ಮದುವೆಯ ಕುರಿತು ತನಿಖೆ ನಡೆಸಬೇಕು. ಈ ವ್ಯಕ್ತಿಯ ಇತಿಹಾಸವನ್ನು ಪರಿಶೀಲನೆ ಮಾಡಬೇಕು. ಈ ಬಗ್ಗೆ ಒಂದು ವಾರದೊಳಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಕೋರ್ಟ್ ನಿರ್ದೇಶಿಸಿದೆ. ಇದೇ ವೇಳೆ ಯುವತಿಗೆ ಮದುವೆಯಾಗಿದ್ದು ಮಕ್ಕಳಿಲ್ಲ ಹಾಗೂ ಈ ವ್ಯಕ್ತಿಯ ಹೆಂಡತಿ ಈಚೆಗೆ ಮೃತಪಟ್ಟಿರುವುದು ಕೋರ್ಟ್ ಗಮನಕ್ಕೆ ಬಂದಿದೆ.