'ಇವನಿಂದ ಮತ್ತೆ ಮೋಸಹೋದೆ, ಎಲ್ಲರೆದುರು ಪ್ರಶ್ನೆಯಾಗಿಯೇ ಉಳಿದುಕೊಂಡೆ... ನಾನಿನ್ನು ಬದುಕಿರಲಾರೆ...'

sharanya
Published on

ಹೈದರಾಬಾದ್​: 'ಜೀವನದಲ್ಲಿ ಇವನಿಂದ ಸೋತುಬಿಟ್ಟೆ, ಮತ್ತೆ ಮೋಸಹೋದೆ.. ಎಲ್ಲರೆದುರು ಪ್ರಶ್ನೆಯಾಗಿಯೇ ಉಳಿದುಕೊಂಡೆ... ನಾನಿನ್ನು ಬದುಕಿದ್ದು ಪ್ರಯೋಜನವಿಲ್ಲ' ಎಂದು ಡೆತ್​ನೋಟ್​ ಬರೆದಿಟ್ಟು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಮೆಹಬೂಬಾಬಾದ್ ಜಿಲ್ಲೆಯ ಪೆದ್ದಮುಪ್ಪರಮ್ ಗ್ರಾಮದಲ್ಲಿ ನಡೆದಿದೆ.

ಶಾರದಾ ಮತ್ತು ಪೊಲೆಪಲ್ಲಿ ವೆಂಕಣ್ಣ ಎಂಬ ದಂಪತಿಯ ಮಗಳಾದ 22 ವರ್ಷದ ಶರಣ್ಯಾ ಪ್ರಿಯಕರನಿಂದ ಮೋಸ ಹೋಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸಾಯುವ ಮುನ್ನ ಡೆತ್​ನೋಟ್​ ಬರೆದಿಡುವ ಜತೆಗೆ, ಪ್ರಿಯಕರನ ಚಿತ್ರವನ್ನು ಕೈಯಿಂದ ಬಿಡಿಸಿರುವ ಶರಣ್ಯಾ, ನಾನು ಸಾಯುವುದಕ್ಕೆ ಇವನೇ ಕಾರಣ ಎಂದು ಪರೋಕ್ಷವಾಗಿ ತಿಳಿಸಿದ್ದಾಳೆ.

ಇವನಿಂದ ಪುನಃ ಮೋಸ ಹೋಗಿದ್ದೇನೆ. ನನಗೆ ಸಾಯುವುದು ಬಿಟ್ಟು ಬೇರೆ ದಾರಿ ಇಲ್ಲ. ಏನು ಮಾಡಬೇಕೆಂಬುದು ಗೊತ್ತಾಗುತ್ತಿಲ್ಲ. ನಿಮ್ಮ ಮುಂದೆ ಮುಖ ತೋರಿಸಲು ಆಗುತ್ತಿಲ್ಲ. ಇಷ್ಟೆಲ್ಲಾ ಆದ ಮೇಲೆ ಬದುಕಿದ್ದು ಪ್ರಯೋಜನವಿಲ್ಲ ಎಂದು ಬರೆದಿರುವ ಯುವತಿ, ದುಪ್ಪಟ್ಟಾದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆಗಿದ್ದೇನು?

ಶರಣ್ಯಾ ಟೈಲರಿಂಗ್​ ವೃತ್ತಿ ನಡೆಸುತ್ತಿದ್ದಳು. ಈಕೆಗೆ​ ಅದೇ ಗ್ರಾಮದ ನಿವಾಸಿ, ವೃತ್ತಿಯಲ್ಲಿ ಚಾಲಕನೂ, ಪಕ್ಷವೊಂದರ ಮುಖಂಡನೂ ಆಗಿರುವ ಯುವಕನ ಜತೆ ಸ್ನೇಹ ಬೆಳೆದಿದೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು.

ಆದರೆ ಮದುವೆಯಾಗಲು ಹೇಳಿದಾಗ ಯುವಕ ನಿರಾಕರಿಸಿದ್ದಾನೆ. ಇದು ಗ್ರಾಮದ ಪಂಚಾಯಿತಿ ವರೆಗೂ ಹೋಗಿ ಪಂಚಾಯಿತಿಯ ಮುಖಂಡರು ಮದುವೆಗೆ ಒಪ್ಪಿಸಿದ್ದರು. ಅಲ್ಲಿ ಮದುವೆಗೆ ಒಪ್ಪುವುದಾಗಿ ಹೇಳಿಕೆ ಕೊಟ್ಟಿದ್ದ ಯುವಕ, ತನಗೆ ಆರು ತಿಂಗಳು ಬೇಕು ಎಂದು ಕೇಳಿದ್ದ.

ಹೀಗೆ ಹೇಳುತ್ತಿದ್ದುದು ತನಗೆ ಮೋಸ ಮಾಡಲು ಎಂದು ತಿಳಿದ ಶರಣ್ಯಾ, ಇನ್ನು ಬದುಕಿದ್ದು ಪ್ರಯೋಜನವಿಲ್ಲ ಎಂದು ಅಂದುಕೊಂಡು ಡೆತ್​ನೋಟ್​ ಜತೆಗೆ ಆತನ ಚಿತ್ರ ಬಿಡಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾವಿಗೆ ಯುವಕನೇ ಕಾರಣ ಎಂದು ಆಕೆಯ ಕುಟುಂಬಸ್ಥರು ಯುವಕನ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಯುವತಿ ಸಾವಿನ ಬಗ್ಗೆ ಲಿಖಿತ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net