

ವಿಜಯನಗರ: ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಕೃಷಿ ಹೊಂಡದಿಂದ ರೈತನ ಬದುಕೇ ನೀರುಪಾಲಾಗಿರುವ ವ್ಯಥೆಯ ಕಥೆ ಇದು. ಈ ರೈತನ ಮಾತುಗಳು ಕೇಳಿದ್ರೆ ಎಂಥವರ ಕರಳು ಚುರ್ ಅನ್ನುತ್ತದೆ.
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ವಟ್ಟಮ್ಮನಹಳ್ಳಿಯ ಯುವ ರೈತ ವೀರೇಶ್ನ ಜಮೀನಿನಲ್ಲಿ ಬೆಳೆದಿರುವ ಪಪ್ಪಾಯ, ದಾಳಿಂಬೆ ಬೆಳೆಯೆಲ್ಲವೂ ಜಲಾವೃತವಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ಸರ್ಕಾರಿ ಹಳ್ಳದಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲಾಗಿದೆ, ಈ ಕಾರಣಕ್ಕೆ ಮಳೆ ನೀರು ಇವರ ಹೊಲಕ್ಕೆ ನುಗಿದ್ದು, ಸಂಪೂರ್ಣ ಬೆಳೆ ನಾಶವಾಗಿದೆ. ಅವೈಜ್ಞಾನಿಕವಾಗಿ ಕೃಷಿ ಹೊಂಡ ನಿರ್ಮಾಣ ಮಾಡಿರುವುದೇ ಇದಕ್ಕೆ ಕಾರಣ, ನಮ್ಮ ಕಣ್ಣೀರು ಒರೆಸುವವರು ಯಾರು ಎಂದು ವೀರೇಶ್ ಕಣ್ಣೀರು ಹಾಕುತ್ತಿದ್ದು, ನ್ಯಾಯ ಕೊಡಿಸಿ ಎಂದು ಗೋಗರೆಯುತ್ತಿದ್ದಾರೆ. ಸರ್ಕಾರಿ ಹಳ್ಳದಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಬಾರದು ಎಂಬ ನಿಯಮವಿದೆ. ಆದರೂ ಅಧಿಕಾರಿಗಳು ಹೀಗೆ ಮಾಡಿ ನಮ್ಮ ಬದುಕನ್ನು ಹಳ್ಳಕ್ಕೆ ತಳ್ಳಿದ್ದಾರೆ ಎಂದು ವೀರೇಶ್ ಕಣ್ಣೀರು ಹಾಕುತ್ತಿದ್ದಾರೆ.
ಪ್ರತಿವರ್ಷವೂ ಇದೇ ಸಮಸ್ಯೆ ಉಂಟಾಗುತ್ತಿದೆ. ರೈತರ ಕಷ್ಟಕ್ಕೆ ಸ್ಪಂದಿಸುವವರೇ ಇಲ್ಲವಾಗಿದೆ. ಇದಕ್ಕೆ ಕೃಷಿ ಅಧಿಕಾರಿಗಳೇ ನೇರ ಹೊಣೆ. ಆದರೂ ನಮ್ಮ ಸಂಕಷ್ಟ ಕೇಳುವವರು ಇಲ್ಲ ಎಂದು ಕಣ್ಣೀರು ಹರಿಸುವ ಈ ಭಾಗದ ರೈರು, ಕೃಷಿ ಅಧಿಕಾರಿಗಳು ಸ್ಪಂದಿಸಿ, ಪ್ರತಿ ವರ್ಷ ಉಂಟಾಗುತ್ತಿರುವ ತೊಂದರೆಯನ್ನು ತಪ್ಪಿಸಿ ಎಂದು ಮನವಿ ಮಾಡುತ್ತಿದ್ದಾರೆ.