ರಾಮಭಕ್ತರ ಮೇಲೆ ಮುಲಾಯಂ ಸರ್ಕಾರದಿಂದ ನಡೆದಿತ್ತು ಗುಂಡಿನ ಸುರಿಮಳೆ: ಭೂಮಿಪೂಜೆಗೆ ಕುಟುಂಬಸ್ಥರಿಗೆ ಆಹ್ವಾನ

kothari
Published on

ಆಯೋಧ್ಯೆ: 1990ರ ಅವಧಿಯದು. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಮುಲಾಯಂ ಸಿಂಗ್‌ ಯಾದವ್‌ ಅಧಿಕಾರ ಸ್ವೀಕರಿಸಿದ್ದ ಸಮಯವದು. ಅದೇ ಸಮಯದಲ್ಲಿ ಅಯೋಧ್ಯೆಯಲ್ಲಿ ರಾಮಭಕ್ತರಿಂದ ಕಾರಸೇವೆ ನಡೆದಿತ್ತು.

ನವೆಂಬರ್‌ 2ನೇ ತಾರೀಖು. ಕಾರಸೇವೆಗಾಗಿ ಒಂದಿಷ್ಟು ರಾಮಭಕ್ತರು ಅಯೋಧ್ಯೆಯನ್ನು ತಲುಪಿದ್ದರು. ಅದನ್ನು ಹತ್ತಿಕ್ಕಲು ಪೊಲೀಸರು ಗುಂಡಿನ ಸುರಿಮಳೆಗೈದಿದ್ದರು. ಅವರಲ್ಲಿ ಕೆಲ ರಾಮಭಕ್ತರು ಜೀವ ಕಳೆದುಕೊಂಡಿದ್ದರು. ಅವರ ಪೈಕಿ ಒಬ್ಬರು ಕೋಲ್ಕತಾದ ಕೊಠಾರಿ ಸಹೋದರರು.

ನಾಡಿದ್ದು ನಡೆಯಲಿರುವ ಐತಿಹಾಸಿಕ ರಾಮಮಂದಿರ ಭೂಮಿಪೂಜೆಯಲ್ಲಿ ಪಾಲ್ಗೊಳ್ಳಲು ಕೇಂದ್ರ ಸರ್ಕಾರ ಕೊಠಾರಿ ಕುಟುಂಬಸ್ಥರಿಗೆ ಆಮಂತ್ರಣ ನೀಡುವ ಮೂಲಕ, ರಾಮಮಂದಿರಕ್ಕಾಗಿ ಬಲಿದಾನ ಮಾಡಿರುವ ಸಹೋದರರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದೆ.

ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಕೊಠಾರಿ ಕುಟುಂಬ ಸದಸ್ಯರಿಗೆ ಕರೆದು ಭೂಮಿ ಪೂಜೆಗೆ ಆಹ್ವಾನಿಸಿದ್ದಾರೆ ಎಂದು ಪೂರ್ಣಿಮಾ ಕೊಠಾರಿ ತಿಳಿಸಿದ್ದಾರೆ.

ಕರೊನಾ ಹಿನ್ನೆಲೆಯಲ್ಲಿ ಗಣ್ಯಾತಿಗಣ್ಯರಿಗೆ ಈ ಶುಭ ಸಂದರ್ಭವನ್ನು ನೇರವಾಗಿ ವೀಕ್ಷಣೆ ಮಾಡುವ ಅವಕಾಶ ಸಿಕ್ಕಿಲ್ಲದ ವೇಳೆ, ತಮ್ಮ ಕುಟುಂಬಕ್ಕೆ ಈ ಭಾಗ್ಯ ಸಿಕ್ಕಿರುವುದಕ್ಕೆ ಕೊಠಾರಿ ಕುಟುಂಬ ಸಂತಸದಿಂದ ಕಣ್ಣೀರು ಹಾಕುತ್ತಿದೆ. ಈ ಸಂದರ್ಭದಲ್ಲಿ ಸೀಮಿತ ಜನರನ್ನು ಅಯೋಧ್ಯೆಗೆ ಆಹ್ವಾನಿಸುತ್ತಿರುವ ಈ ಸಂದರ್ಭದಲ್ಲಿ ನನ್ನನ್ನು ಈ ರೀತಿ ಆಹ್ವಾನಿಸಿರುವುದು ನನ್ನ ಸಹೋದರರ ಬಲಿದಾನಕ್ಕೆ ನೀಡಿರುವ ಸನ್ಮಾನ. ನನ್ನ ಜನ್ಮ ಪಾವನವಾಯಿತು. ನನ್ನ ಸಹೋದರರು ಕಂಡ ಕನಸು ಈಗ ಈಡೇರಿದೆ ಎಂದಿದ್ದಾರೆ ಪೂರ್ಣಿಮಾ.

‘1990ರ ಅಕ್ಟೋಬರ್ 30 ರಂದು ನಡೆಯಲಿದ್ದ ಕಾರಸೇವೆಗಾಗಿ ನನ್ನ ಸಹೋದರರು ಅಕ್ಟೋಬರ್ 22ರಂದು ಅಯೋಧ್ಯೆಗೆ ಹೊರಟಿದ್ದರು. ನನ್ನ ಮದುವೆ ಡಿಸೆಂಬರ್ 16ಕ್ಕೆ ನಿಶ್ಚಯವಾಗಿತ್ತು. ಆದರೆ ನವೆಂಬರ್ 2ರಂದು ಮುಲಾಯಂ ಸಿಂಗ್ ಸರ್ಕಾರ ನಡೆಸಿದ ಗೋಲಿಬಾರ್‌ನಲ್ಲಿ ನನ್ನ ಸಹೋದರರು ಹುತಾತ್ಮರಾದರು. ಈ ಗೋಲಿಬಾರ್‌ಗೆ ಮುಖ್ಯಮಂತ್ರಿಗಳೇ ಆದೇಶ ನೀಡಿದ್ದರು’ ಎಂದು ಹೇಳಿದರು ಪೂರ್ಣಿಮಾ.

30 ವರ್ಷಗಳಲ್ಲಿ ನನಗಾದ ದೊಡ್ಡ ಸಂತೋಷ ಇದು ಎಂದು ಸಹೋದರರ ನೆನೆದು ಕಣ್ಣೀರು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net