ಪಾರ್ಟಿ ಮಾಡಿ ಫಜೀತಿಗೆ ಸಿಲುಕಿದ ನಟಿಯರು: ಕರೀನಾ, ಅಮೃತಾಗೆ ಕರೊನಾ- ಹಲವು ಸಿನಿತಾರೆಯರ ಕಟ್ಟಡ ಸೀಲ್‌ಡೌನ್‌!

kareena
Published on

ಮುಂಬೈ: ಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ಪಾರ್ಟಿಯಲ್ಲಿ ಭಾಗವಹಿಸಿ ಬಂದಿದ್ದ ಬಾಲಿವುಡ್‌ ನಟಿಯರಾದ ಕರೀನಾ ಕಪೂರ್‌ ಹಾಗೂ ಅಮೃತಾ ಅರೋರಾರಿಗೆ ಕರೊನಾ ಪಾಸಿಟಿವ್‌ ಕಾಣಿಸಿಕೊಂಡಿದ್ದು, ಅವರು ಇರುವ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ.

ನಟ ಸೊಹೇಲ್ ಖಾನ್ ಅವರ ಪತ್ನಿ ಸೀಮಾ ಖಾನ್ ಇರುವ ಕಿರಣ್ ಅಪಾರ್ಟ್‌ಮೆಂಟ್, ಕರೀನಾ ಕಪೂರ್ ಇರುವ ಸದ್ಗುರು ಶರಣ್, ಕರಣ್ ಜೋಹರ್ ಇರುವ ದಿ ರೆಸಿಡೆನ್ಸಿ, ಅಮೃತ ಅರೋರಾ ಇರುವ ಗವರ್ನಮೆಂಟ್​ ಹೇರಿಟೇಜ್ ಅನ್ನು ಸೀಲ್ ಮಾಡಲಾಗಿದೆ ಎಂದು ಬೃಹನ್‌ಮುಂಬೈ ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕರಣ್ ಜೋಹರ್ ಏರ್ಪಡಿಸಿದ್ದ ಪಾರ್ಟಿಯಲ್ಲಿ ಇವರೆಲ್ಲರೂ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದರು. ಆದ್ದರಿಂದ ಸೋಂಕು ಕಾಣಿಸಿಕೊಂಡಿರುವ ಸಾಧ್ಯತೆ ಇದೆ. ಇದೀಗ ಪಾರ್ಟಿಯಲ್ಲಿ ಭಾಗವಹಿಸಿದವರು ಕೂಡ ಪರೀಕ್ಷೆಗೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕರಣ್ ಜೋಹರ್ ಅವರಿಗೂ ಇದಾಗಲೇ ಪರೀಕ್ಷೆ ಮಾಡಲಾಗಿದೆ. ಆದರೆ ಅವರ ವರದಿ ನೆಗೆಟಿವ್ ಬಂದಿದೆ. ಆದರೂ ಸದ್ಯ ಹೋಂ ಐಸೋಲೇಷನ್‌ನಲ್ಲಿ ಇರುವಂತೆ ವೈದ್ಯರು ಹೇಳಿದ್ದಾರೆ. ಪಾರ್ಟಿಯಲ್ಲಿ ಭಾಗವಹಿಸಿದ್ದ ಉಳಿದವರ ವರದಿ ಬರಬೇಕಿದೆ. ಈ ಎಲ್ಲರ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಪರೀಕ್ಷೆಯನ್ನು ಕೂಡ ಮಾಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net