ಜೊತೆ ಜೊತೆಯಲಿ... ನಟಿ ‘ಅನು’ ಮನೆಯಲ್ಲಿ ಮದುವೆಯ ಸಂಭ್ರಮ: ಜಾಲತಾಣದಲ್ಲಿ ಫೋಟೋ ಶೇರಿಂಗ್

megha shetty
Published on

ಬೆಂಗಳೂರು: ಜೊತೆ ಜೊತೆಯಲಿ... ಧಾರಾವಾಹಿಯಲ್ಲಿ ಅಮೋಘ ನಟನೆಯ ಮೂಲಕ ಮನೆಮಾತಾಗಿರುವ ನಟಿ ಅನು ಸಿರಿಮನೆ. ಇವರ ನಿಜವಾದ ಹೆಸರು ಮೇಘಾ ಶೆಟ್ಟಿ. ಈ ನಟಿಯಲ್ಲಿ ಮನೆಯಲ್ಲೀಗ ಮದುವೆಯ ಸಂಭ್ರಮ. ಅಂದರೆ ಮೇಘಾಳ ಸಹೋದರಿ ಮದುವೆ ನಡೆಯುತ್ತಿದ್ದು, ಈ ಕುರಿತಾಗಿ ಅನೇಕ ಫೋಟೋಗಳನ್ನು ಮೇಘಾ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಮೇಘಾ ಸಹೋದರಿ ಸುಷ್ಮಾ ಶೆಟ್ಟಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದಾಗಲೇ ಮದುವೆ ಶಾಸ್ತ್ರಗಳು ನಡೆಯುತ್ತಿವೆ. ಅರಿಶಿಣ, ಮೆಹೆಂದಿ ಶಾಸ್ತ್ರಗಳು ನಡೆದಿದ್ದು, ಅವುಗಳ ಫೋಟೋಗಳನ್ನು ಮೇಘಾ ಹಂಚಿಕೊಂಡಿದ್ದಾರೆ.

ಸುಷ್ಮಾ ಶೆಟ್ಟಿ ಅವರು ಮೇಘಾ ಶೆಟ್ಟಿ ಅವರಿಗೂ ಮುನ್ನವೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಆದರೆ ನಟಿಯಾಗಿ ಅಲ್ಲ, ಬದಲಿಗೆ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೇಘಾ ಅವರಿಗೆ ಜೊತೆ ಜೊತೆಯಲಿ ಧಾರಾವಾಹಿಗೆ ಸುಷ್ಮಾ ಅವರದ್ದೇ ಮೇಕಪ್. ಸುಷ್ಮಾ ಅವರು ವಿನೋದ್ ಜಿ. ಎಂಬುವವರ ಕೈಹಿಡಿಯುತ್ತಿದ್ದಾರೆ. ಕೆಳದ ಜನವರಿಯಲ್ಲಿ ಇವರಿಬ್ಬರ ನಿಶ್ಚಿತಾರ್ಥವಾಗಿತ್ತು.

ಮದುವೆ, ಪ್ರೀತಿ ಕುರಿತಂತೆ ಸುಷ್ಮಾ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ‘ಲವ್​ನಲ್ಲಿ ಎಲ್ಲವೂ ಪರ್ಫೆಕ್ಟ್ ಇರಬೇಕು ಅಂತೇನಿಲ್ಲ, ಸತ್ಯವಾಗಿರಬೇಕು. ನಾವು ಎಷ್ಟು ದಿನಗಳು, ತಿಂಗಳು, ವರ್ಷಗಳ ಕಾಲ ಜೊತೆಗಿರುತ್ತೇವೆ ಎನ್ನೋದು ಲವ್ ಅಲ್ಲ. ಪ್ರತಿದಿನ ಎಷ್ಟು ಪ್ರೀತಿ ಮಾಡುತ್ತೀರಿ ಎನ್ನೋದು ಲವ್. ನನ್ನ ಖುಷಿಯ ಮೂಲ ನೀನು, ನನ್ನ ಜಗತ್ತಿನ, ಹೃದಯದ ಕೇಂದ್ರ ಬಿಂದು ನೀನು’ ಎಂದು ಅವರು ಉಲ್ಲೇಖಿಸಿದ್ದಾರೆ.

ಸದ್ಯ ಮೇಘಾ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ನಟ ಗಣೇಶ್ ನಟನೆಯ 'ತ್ರಿಬ್ಬಲ್ ರೈಡಿಂಗ್' ಸಿನಿಮಾದ ನಾಯಕಿಯರಲ್ಲಿ ಮೇಘಾ ಒಬ್ಬರಾಗಿದ್ದಾರೆ. ಅದೇ ರೀತಿ ಕವೀಶ್ ಶೆಟ್ಟಿ ನಾಯಕ ನಟರಾಗಿರುವ ಪ್ಯಾನ್ ಇಂಡಿಯಾ ಸಿನಿಮಾಕ್ಕೂ ಇವರೇ ನಟಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net