ವಿವಾದಕ್ಕೆ ಕಾರಣವಾಗಿದ್ದ ಜಿನ್ನಾ ಟವರ್‌ಗೆ ಕೇಸರಿ, ಬಿಳಿ, ಹಸಿರು ಬಣ್ಣ- ಶಾಸಕ ಮುಸ್ತಫಾರಿಂದಲೇ ಪೇಟಿಂಗ್

jihna
Published on

ಅಮರಾವತಿ: ಆಂಧ್ರ ಪ್ರದೇಶದ ಗುಂಟೂರಿನ ಜಿನ್ನಾ ಟವರ್‌ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಇಲ್ಲಿ ತ್ರಿವರ್ಣ ಧ್ವಜದ ಬಣ್ಣ ಬಳಿಯಲಾಗಿದ್ದು ಗುರುವಾರವೇ ಧ್ವಜಾರೋಹಣ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಈ ಟವರ್‌ ವಿವಾದಕ್ಕೆ ಕಾರಣವಾಗಲು ಇದಕ್ಕೆ ಇರುವ ಹೆಸರು. ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಹೆಸರಿನ ಬದಲಿಗೆ ನಮ್ಮ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್​ ಕಲಾಂ ಅಥವಾ ದಲಿತ ಕವಿ ಗುರಾಮ್​ ಜಶುವಾ ಹೆಸರಿಡಬೇಕು ಎಂಬ ಕೂಗು ಜೋರಾಗುತ್ತಿದೆ. ಇದರ ನಡುವೆಯೇ ಇದೇ 26ರ ಗಣರಾಜ್ಯೋತ್ಸವದ ದಿನ ಈ ಟವರ್ ಬಳಿ ಹಿಂದೂ ವಾಹಿನಿ ಕಾರ್ಯಕರ್ತರು ತ್ರಿವರ್ಣ ಧ್ವಜ ಹಾರಿಸಲು ಪಯತ್ನ ಪಟ್ಟಿದ್ದರು. ಆಗ ಗಲಾಟೆ ನಡೆದು ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು.

ಆಂಧ್ರ ಪ್ರದೇಶದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಜಿನ್ನಾ ಟವರ್ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪಾಕಿಸ್ತಾನದ ರಾಷ್ಟ್ರಪಿತ ಜಿನ್ನಾ ಹೆಸರು ಭಾರತದಲ್ಲಿ ಟವರ್‌ವೊಂದಕ್ಕೆ ಇಡಲಾಗಿದೆ. ಹೆಸರು ಬದಲಾವಣೆ ಮಾಡಿ, ನೀವು ಮಾಡಿಲ್ಲ ಎಂದರೆ ಅಧಿಕಾರಕ್ಕೆ ಬಂದ ಕೂಡಲೇ ನಾವು ಹೆಸರು ಬದಲಾಯಿಸುತ್ತೇವೆ. ಇಲ್ಲ ಟವರ್ ಧ್ವಂಸ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಇದರ ನಡುವೆಯೇ ಇದೀಗ ತ್ರಿವರ್ಣ ಪೇಂಟ್‌ ಮಾಡಲಾಗಿದೆ.

ಆಂಧ್ರದ ಆಡಳಿತ ಪಕ್ಷ ವೈಎಸ್​ಆರ್​ಸಿಪಿಯ ಶಾಸಕ ಮುಸ್ತಫಾ ಅವರೇ ಖುದ್ದಾಗಿ ನಿಂತು ಇಡೀ ಟವರ್​ಗೆ ಪೇಂಟಿಂಗ್​ ಮಾಡಿಸಿದ್ದಾರೆ. ‘ಈ ಟವರ್​ಗೆ ರಾಷ್ಟ್ರಧ್ವಜ ಮಾದರಿಯಲ್ಲಿ ಪೇಂಟಿಂಗ್​ ಮಾಡಬೇಕು ಎಂದು ಅನೇಕರು ಮನವಿ ಮಾಡಿದ್ದರು. ಅದರಂತೆ ಬಣ್ಣ ಬಳಿಯಲಾಗಿದೆ’ ಎಂದು ಅವರು ಹೇಳಿದ್ದಾರೆ. ‘ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ಹಲವು ಮುಸ್ಲಿಂ ಮುಖಂಡರೂ ಹೋರಾಡಿದ್ದಾರೆ. ಆದರೆ ಸ್ವಾತಂತ್ರ್ಯ ಬಂದ ನಂತರ ಅದೆಷ್ಟೋ ಜನರು ಪಾಕಿಸ್ತಾನಕ್ಕೆ ಹೋಗಿ ನೆಲೆಸಿದರು. ನಾವು ಭಾರತೀಯರಾಗಿ ಇಲ್ಲಿಯೇ ಜೀವನ ನಡೆಸುತ್ತಿದ್ದೇವೆ. ನಮ್ಮ ತಾಯ್ನಾಡಾದ ಭಾರತದ ಬಗ್ಗೆ ನಮಗೂ ಅಪಾರ ಪ್ರೀತಿ-ಗೌರವ ಇದೆ’ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net