ಸಮತಾ ಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿಗೆ ನಾಲ್ಕು ವರ್ಷ ಜೈಲು

jaya jaitly
Published on

ನವದೆಹಲಿ: ಎರಡು ದಶಕಗಳ ಹಿಂದಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮತಾ ಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿ ಮತ್ತು ಇತರ ಇಬ್ಬರಿಗೆ ದೆಹಲಿಯ ವಿಶೇಷ ಕೋರ್ಟ್‌ ಇಂದು ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜತೆಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

2001 ರಲ್ಲಿ ನಡೆದಿರುವ ರಕ್ಷಣಾ ಒಪ್ಪಂದದ ವಿವಾದ ಇದಾಗಿದೆ. ಈ ಪ್ರಕರಣದಲ್ಲಿ ಜಯಾ ಜೇಟ್ಲಿ ಸೇರಿದಂತೆ ಅವರ ಮಾಜಿ ಸಹೋದ್ಯೋಗಿ ಗೋಪಾಲ್ ಪಚೇರ್ವಾಲ್ ಮತ್ತು ನಿವೃತ್ತ ಮೇಜರ್ ಜನರಲ್ ಎಸ್ಪಿ ಮುರ್ಗೈ ಅವರಿಗೂ ಶಿಕ್ಷೆ ವಿಧಿಸಲಾಗಿದೆ. ಎಲ್ಲರೂ ಇಂದು ಸಂಜೆ 5 ಗಂಟೆ ಒಳಗೆ ಶರಣಾಗುವಂತೆ ಆದೇಶಿಸಲಾಗಿದೆ.

ವೆಸ್ಟೆಂಡ್ ಇಂಟರ್‌ನ್ಯಾಷನಲ್ ಕಂಪನಿಯ ಪ್ರತಿನಿಧಿಯಾಗಿರುವ ಮ್ಯಾಥ್ಯೂ ಸ್ಯಾಮ್ಯುಯೆಲ್ ಅವರಿಂದ ಆರೋಪಿಗಳು 2006ರಲ್ಲಿ ಅಕ್ರಮ ಹಣ ಸ್ವೀಕರಿಸಿದ್ದಾರೆ ಎಂಬ ಪ್ರಕರಣ ಇದಾಗಿದೆ. ಸೈನ್ಯದಿಂದ ಥರ್ಮಲ್ ಇಮೇಜರ್‌ಗಳಿಗೆ ಸರಬರಾಜು ಆದೇಶಗಳನ್ನು ಪಡೆಯಲು ಅಕ್ರಮ ಹಣವನ್ನು ಸ್ವೀಕರಿಸಲಾಗಿದೆ ಎಂಬ ಆರೋಪ ಇವರ ಮೇಲಿತ್ತು.

ಸಿಬಿಐ ತನಿಖೆ ಕೈಗೊಂಡು ಎಲ್ಲರೂ ತಪ್ಪಿತಸ್ಥರು ಎಂದು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್‌ ಜೈಲು ಶಿಕ್ಷೆ ವಿಧಿಸಿದ್ದು, ಎಲ್ಲರಿಗೂ ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net