'ಅವ್ರಿರೋದು ಬೆಳಗಾವಿ, ನಾನಿರೋದು ಬೆಂಗಳೂರು... ಸಿಡಿ ವಿಚಾರ ಅವರ ವೈಯಕ್ತಿಕ, ನನಗ್ಹೇಗೆ ಗೊತ್ತಾಗತ್ತೆ?'

CD nagaraju
Published on

ನೆಲಮಂಗಲ: ಸಿಡಿ ಹಗರಣದಲ್ಲಿ ಸಿಲುಕಿದ್ದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ಪ್ರಕರಣಕ್ಕೆ ಈಗ ಟ್ವಿಸ್ಟ್‌ ಸಿಕ್ಕು ಅದರಲ್ಲಿ ಇರೋದು ತಾನೇ ಅವರು ಒಪ್ಪಿಕೊಂಡಿದ್ದಾರೆ. ಅದರ ಬೆನ್ನಲ್ಲೇ ಇದೀಗ ಭಾರಿ ಚರ್ಚೆ ಶುರುವಾಗಿದ್ದು, ಮಾಜಿ ಶಾಸಕ, ರಮೇಶ್ ಜಾರಕಿಹೊಳಿ ಆಪ್ತ ಎಂ.ವಿ ನಾಗರಾಜು ಈ ವಿಷಯದಲ್ಲಿ ತಮಗೇನೂ ಗೊತ್ತಿಲ್ಲ ಎನ್ನುವಂತೆ ನುಣುಚಿಕೊಂಡಿದ್ದಾರೆ.

ನೆಲಮಂಗದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಾಗರಾಜು, ಈ ಹಿಂದೆ ಸಿಡಿ ಬಗ್ಗೆ ನನಗೆ ಅಷ್ಟೇನೂ ಮಾಹಿತಿ ಇರಲಿಲ್ಲ, ಜಾರಕಿಹೊಳಿ ಅವರು ಮೊದಲು ಅದರಲ್ಲಿ ಇರುವುದು ತಾವಲ್ಲ ಎಂದಿದ್ದರು. ಆದರೆ ಇದೀಗ ಅದರಲ್ಲಿ ಇರುವುದು ತಾವೇ ಎಂದು ಹೇಳಿದ್ದನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡೆ ಎಂದರು.

ಘಟನೆ ಬೆಳಕಿಗೆ ಬಂದಾಗಲೂ ನಾನು ವಿಡಿಯೋದಲ್ಲಿ ಇರುವುದು ಜಾರಕಿಹೊಳಿ ಅಲ್ಲ ಅಂದಿದ್ದೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ಆದರೆ ಅವರ ವೈಯಕ್ತಿಕ ವಿಚಾರ ಏನಾಗಿದೆಯೋ ನನಗೆ ಗೊತ್ತಿಲ್ಲ. ರಾಜಕೀಯವಾಗಿ ಆತ್ಮೀಯತೆ ಯಿಂದ ಇದ್ದೇವೆ, ಆದರೆ ಈ ವಿಷಯದ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ಅವರು ಇರೋದು ಬೆಳಗಾವಿಯಲ್ಲಿ, ನಾನಿರೋದು ಬೆಂಗಳೂರಿನಲ್ಲಿ. ಅವರು ಬೆಂಗಳೂರಿಗೆ ಬಂದಾಗ ಭೇಟಿ ಮಾಡುತ್ತಿದ್ದೆವು ಅಷ್ಟೇ. ಅವರನ್ನು ಪಕ್ಷಕ್ಕೆ ಕರೆದುಕೊಂಡು ಬಂದವನು ನಾನೇ, ಸೇರಿಸಿದ್ದು ಕೂಡ ನಾನೇ. ಹಾಗೆಂದು ಅವರ ವೈಯಕ್ತಿಕ ವಿಚಾರಗಳು ನನಗೇನು ಗೊತ್ತಿರುತ್ತದೆ? ಪ್ರಕರಣ ಬೆಳಕಿಗೆ ಬರುವ ನಾಲ್ಕೂವರೆ ತಿಂಗಳ ಮುಂಚೆಯೆ ನನಗೆ ಗೊತ್ತಿತ್ತು, ಯಾವುದೋ ಸಿಡಿ ಇದೆ ಎಂದು ಅವರು ಹೇಳಿದ್ದರು. ನಂತರ ಇದರಲ್ಲಿ ಷಡ್ಯಂತ್ರ ಇದೆ. ಅದರಲ್ಲಿ ಇರುವುದು ನಾನಲ್ಲ, ಅಂಥ ಕೆಲಸ ನಾನು ಮಾಡುವುದಿಲ್ಲ ಎಂದಿದ್ದರು.

ಇದೀಗ ರಾಜಕೀಯವಾಗಿ ಷಡ್ಯಂತ್ರ ರೂಪಿಸಿ ಯಾರೋ ಉದ್ದೇಶಪೂರ್ವಕವಾಗಿ ಇಂಥ ಕೆಲಸ ಮಾಡಿಸಿದ್ದಾರೆ. ಈಗ ಅವರು ಸೇಫ್‌ ಆಗಬೇಕು ಎಂದು ಇವರು ಒಪ್ಪಿಕೊಂಡ ಹಾಗಿದೆ. ತನಿಖೆ ನಡೆದರೆ ಎಲ್ಲಾ ಗೊತ್ತಾಗುತ್ತದೆ. ಅಷ್ಟಕ್ಕೂ ಅದು ಅವರ ವೈಯಕ್ತಿಕ ವಿಚಾರ. ನನಗೇನು ಅದರ ಬಗ್ಗೆ ಅರಿವಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net