

ಶ್ರೀನಗರ: ಇಲ್ಲಿನ ನೌಗಾಮ್ ಪ್ರದೇಶದಲ್ಲಿ ಉಗ್ರರು ಇಂದು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ್ದರಿಂದ ಇಬ್ಬರು ಸಿಆರ್ಪಿಎಫ್ ಯೋಧರು ಬಲಿಯಾಗಿದ್ದಾರೆ.
ನೌಗಾಮ್ ಪ್ರದೇಶದ ಕಂಡಿಜಾಲ್ ಸೇತುವೆ ಬಳಿ ಇಂದು ಮಧ್ಯಾಹ್ನ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಅವರ ನಡುವಿನ ಹೋರಾಟದಲ್ಲಿ ಇಬ್ಬರು ಹುತಾತ್ಮರಾಗಿರುವುದಾಗಿ ಸೇನೆ ತಿಳಿಸಿದೆ. ಗುಂಡಿನ ದಾಳಿಯಲ್ಲಿ ಈ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದವು. ಆದರೆ ನಂತರ ಅವರು ಹುತಾತ್ಮರಾಗಿದ್ದಾರೆ.
ಈ ಘರ್ಷಣೆಯಲ್ಲಿ ಮೂವರು ಭಾರತೀಯ ಯೋಧರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಇಲ್ಲಿನ ಸೇನೆಯ 92 ಬೇಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮುಂದಿನ ಮಾಹಿತಿ ತಿಳಿದುಬರಬೇಕಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
110ನೇ ಬೆಟ್ಯಾಲಿಯನ್ ಸಿಬ್ಬಂದಿ ಸಲಕರಣೆಗಳನ್ನು ಒಯ್ಯುತ್ತಿದ್ದ ಸಂದರ್ಭದಲ್ಲಿ ಭಯೋತ್ಪಾದಕರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಐವರು ಯೋಧರಿಗೆ ಗಂಭೀರ ಗಾಯಗಳಾಗಿದ್ದವು. ಅ ಪೈಕಿ ಇಬ್ಬರು ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏಕಾಏಕಿ ನಡೆದ ಈ ಗುಂಡಿನ ದಾಳಿಯ ನಂತರ ಜಮ್ಮು-ಕಾಶ್ಮೀರದ ನೌಗಾಮ್ ಪ್ರದೇಶವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.