

ನಲ್ಗೊಂಡ (ಹೈದರಾಬಾದ್): ತೆಲಂಗಾಣ ರಾಜ್ಯದ ನಲ್ಗೊಂಡದ ಕಣಗಲ್‌ನ ಚೇರ್ಲ ಗೌರಾರಾಮ ಗ್ರಾಮದ ಪತಿಮಹಾಶಯನೊಬ್ಬ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಪೊಲೀಸರಲ್ಲಿ ಗೋಳಾಟ ನಡೆಸಿ ಪೊಲೀಸರನ್ನು ಬೇಸ್ತು ಬೀಳಿಸಿರುವ ಘಟನೆ ನಡೆದಿದೆ.
ಪೊಲೀಸ್ ಕಂಟ್ರೋಲ್ ರೂಂನ 100ನೇ ನಂಬರ್‌ಗೆ ಕರೆ ಮಾಡಿದ್ದಾನೆ. ಪೊಲೀಸರು ಸಮಸ್ಯೆ ಏನು ಎಂದು ಕೇಳಿದಾಗ ಜೋರಾಗಿ ಅಳಲು ಶುರು ಮಾಡಿದ್ದಾನೆ. ಹೀಗೆ 6ಕ್ಕೂ ಅಧಿಕ ಬಾರಿ ಕರೆ ಮಾಡಿ ಮಾಡಿ ಪೊಲೀಸರಿಗೆ ಕಿರಿಕಿರಿ ಉಂಟು ಮಾಡಿದ್ದಾನೆ. ಆದರೆ ಫೋನಿನಲ್ಲಿ ಏನು ಎಂದು ಸಮಸ್ಯೆ ಹೇಳಲಿಲ್ಲ.
ಕೊನೆಗೆ ಅವನು ಮಾಡಿದ ನಂಬರ್‌ನ ಜಾಡು ಹಿಡಿದು ಪೊಲೀಸರು ಮನೆಗೆ ಹೋಗಿದ್ದಾರೆ. ಅಲ್ಲೂ ಅವನು ಬಾಯಿ ಬಿಡಲಿಲ್ಲ. ಕೊನೆಗೆ ಆತನ ವಿಚಿತ್ರ ನಡವಳಿಕೆ ಕಂಡು ಪೊಲೀಸರು ಆತನನ್ನು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಕೊನೆಗೆ ಕಾರಣ ಏನು ಎಂದು ಕೇಳಿದಾಗ, ನನ್ನ ಪತ್ನಿಯಿಂದ ನನಗೆ ತುಂಬಾ ಅನ್ಯಾಯವಾಗಿದೆ. ಆಕೆ ಮಟನ್ ಕರ್ರಿ ಸರಿಯಾಗಿ ಮಾಡುತ್ತಿಲ್ಲ, ನಾನು ಕೇಳಿದಾಗಲೆಲ್ಲ ನಾನ್ ವೆಜ್ ಮಾಡುತ್ತಿಲ್ಲ. ನನಗೆ ನ್ಯಾಯ ಕೊಡಿಸಿ, ಆಕೆಯನ್ನು ಅರೆಸ್ಟ್ ಮಾಡಿ ಅಂತ ಗೋಳಾಡಿದ್ದಾನೆ. ಇದನ್ನು ಕೇಳಿ ಪೊಲೀಸರಿಗೆ ನಗಬೇಕೋ ಏನೋ ಗೊತ್ತಾಗಲಿಲ್ಲ.
ಕೊನೆಗೆ ವಿಚಾರಿಸಿದಾಗ ಈತನ ಹೆಸರು ನವೀನ್. ಮಹಾದೊಡ್ಡ ಕುಡುಕ ಎಂದು ತಿಳಿದುಬಂದಿದೆ. ದಿನವೂ ಕಂಠಪೂರ್ತಿ ಕುಡಿದು ಪತ್ನಿಗೆ ಹಿಂಸೆ ಕೊಡುತ್ತಾನೆ. ಪದೇ ಪದೇ ನಾನ್‌ವೆಜ್ ಮಾಡಲು ಹೇಳುತ್ತಿದ್ದ. ಆಕೆ ಮಾಡಲು ನಿರಾಕರಿಸಿದಾಗ ಅವಳ ಮೇಲೆ ಹಲ್ಲೆ ಮಾಡಿ ತಾನೇ ಪೊಲೀಸರಿಗೆ ಕರೆ ಮಾಡಿರುವ ವಿಷಯ ತಿಳಿದಿದೆ.
ಕಂಟ್ರೋಲ್ ರೂಂಗೆ ಕರೆ ಮಾಡಿ ಕಿರಿಕಿರಿ ಮಾಡಿದ್ದಲ್ಲದೇ, ಕರ್ತವ್ಯದ ಸಮಯ ಹಾಳು ಮಾಡಿದ್ದಕ್ಕೆ ಕೇಸ್ ಹಾಕಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 290 ಮತ್ತು 510 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.