ಶಾಲಾ ಕಾಲೇಜುಗಳಲ್ಲಿ ಹಿಜಾಬ್​ ಬ್ಯಾನ್​- ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ನೋಟಿಸ್​, ಕೋರ್ಟ್​ ಹೇಳಿದ್ದೇನು?

hijab
Published on

ನವದೆಹಲಿ: ಶಾಲಾ ಮತ್ತು ಕಾಲೇಜು ತರಗತಿಗಳಲ್ಲಿ ಹಿಜಾಬ್​ ಧರಿಸುವುದನ್ನು ನಿಷೇಧಿಸಿದ್ದ ಕರ್ನಾಟಕ ಸರ್ಕಾರದ ಆದೇಶ ಎತ್ತಿ ಹಿಡಿದ ರಾಜ್ಯ ಹೈಕೋರ್ಟ್​ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಸಲಾಗಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ ಕರ್ನಾಟಕ ಸರ್ಕಾರಕ್ಕೆ ನೋಟಿಸ್​ ಜಾರಿಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್​ ನೇತೃತ್ವದ ಪೀಠ ಈ ಮೇಲ್ಮನವಿ ವಿಚಾರಣೆಯನ್ನು ನಡೆಸಿತು. ಇವರ ಜತೆ ನ್ಯಾಯಮೂರ್ತಿಗಳಾದ ಹೇಮಂತ್​ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿರುವ ನ್ಯಾಯ ಪೀಠ ವಿಚಾರಣೆ ನಡೆಸುತ್ತಿದ್ದಾರೆ. ಈ ಮೇಲ್ಮನವಿಯ ವಿಚಾರಣೆಯನ್ನು ಬರುವ ಸೆಪ್ಟೆಂಬರ್​ 5ಕ್ಕೆ ಮುಂದೂಡಲಾಗಿದೆ.

ಈ ಮೇಲ್ಮನವಿಯನ್ನು ತುರ್ತು ವಿಚಾರಣೆಗೆ ತೆಗೆದುಕೊಳ್ಳುವಂತೆ ಹಿಂದಿನ ಸಿಜೆಐ ಎನ್​.ವಿ. ರಮಣ ಹಲವು ಬಾರಿ ಸೂಚಿಸಿದ್ದರು. ಆದರೆ ಈ ಪ್ರಕರಣ ವಿಚಾರಣೆಗೆ ಲಿಸ್ಟ್​ ಆಗಿರಲಿಲ್ಲ. ಸರ್ಕಾರಿ ಅಧಿಕಾರಿಗಳ ಮಲತಾಯಿ ಧೋರಣೆಯಿಂದಾಗಿ ವಿದ್ಯಾರ್ಥಿಗಳ ನಂಬಿಕೆಯ ಆಚರಣೆಗೆ ಅಡ್ಡಿಯಾಗಿದೆ. ಇದರಿಂದ ಅನಗತ್ಯ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಉಂಟಾಗಿದೆ ಎಂದು ಒಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಇದರ ವಿಚಾರಣೆಯನ್ನು ಮುಂದೂಡುವಂತೆ ಅರ್ಜಿದಾರರು ಮನವಿ ಮಾಡಿಕೊಂಡಿದ್ದರು. ಆದರೆ ಇದನ್ನು ಪೀಠ ತಿರಸ್ಕರಿಸಿದ್ದು, ಸೆ.5ಕ್ಕೆ ವಿಚಾರಣೆ ಮುಂದೂಡಿದೆ. ವಿಚಾರಣೆಯನ್ನು ತುರ್ತಾಗಿ ನಡೆಸುವಂತೆ ಈ ಮೊದಲು ಪದೇ ಪದೇ ಕೇಳಿಕೊಳ್ಳಲಾಗಿತ್ತು. ಪರಿಸ್ಥಿತಿ ಹೀಗಿರುವಾಗ ವಿಚಾರಣೆಯನ್ನು ಮುಂದಕ್ಕೆ ಹಾಕಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟವಾಗಿ ನುಡಿಯಿತು. ಇವುಗಳ ವಿಚಾರಣೆಯನ್ನು ಮುಂದೂವಂತೆ ಕೇಳಿಕೊಂಡ ಮೇಲ್ಮನವಿದಾರರ ಪರ ವಕೀಲರ ಕ್ರಮಕ್ಕೆ ನ್ಯಾಯಪೀಠ ತೀವ್ರ ಅಸಮಾಧಾವನ್ನು ವ್ಯಕ್ತಪಡಿಸಿ, ಇದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದಿತು. ವಿಚಾರಣೆ ತುರ್ತಾಗಿ ನಡೆಯಬೇಕು ಎಂದು ಕೇಳಿಕೊಂಡವರು ನೀವೆ. ಈಗ ಏಕಾಏಕಿ ಮುಂದೂಡಿ ಎಂದರೆ ಏನರ್ಥ? ಇಂಥ ಆಟವನ್ನು ನಾವು ಸಹಿಸುವುದಿಲ್ಲ ಎಂದು ಪೀಠ ಹೇಳಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net