ಸಿಎಂ ಹುದ್ದೆಯಿಂದ ಕೆಳಗಿಳಿಯುತ್ತಲೇ ಶುರುವಾಯ್ತು ಸಂಕಟ: ಬಿಎಸ್​ವೈಗೆ ಹೈಕೋರ್ಟ್​ ನೋಟಿಸ್​

BSY
Published on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರಿಗೆ ಮತ್ತೆ ಸಂಕಟ ಎದುರಾಗಿದೆ. ಈ ಹಿಂದೆ ಅವರು ಮುಖ್ಯಮಂತ್ರಿ ಇದ್ದಾಗ ಸಾಮಾಜಿಕ ಹೋರಾಟಗಾರ ಟಿಜೆ ಆಬ್ರಹಾಂ ಸಲ್ಲಿಸಿರುವ ಅರ್ಜಿಗೆ ಮತ್ತೆ ಜೀವ ಬಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ ವಿಜಯೇಂದ್ರ ಅವರಿಗೆ ನೋಟಿಸ್​ ಜಾರಿಗೆ ಆದೇಶಿಸಿದೆ.

ಯಡಿಯೂರಪ್ಪ, ವಿಜಯೇಂದ್ರ ಸೇರಿದಂತೆ ಐಎಎಸ್ ಅಧಿಕಾರಿ ಪ್ರಕಾಶ್ ಹಾಗೂ ಎಸ್​.ಟಿ. ಸೋಮಶೇಖರ್​ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ಇಬ್ರಾಹಿಂ ಕೇಸನ್ನು ದಾಖಲು ಮಾಡಿದ್ದರು. ಆದರೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಹಿನ್ನೆಲೆಯಲ್ಲಿ ಅವರ ವಿಚಾರಣೆಗೆ ರಾಜ್ಯಪಾಲರ ಪೂರ್ವಾನುಮತಿ ಬೇಕಿತ್ತು. ಆದರೆ ಆಗ ರಾಜ್ಯಪಾಲರು ಅನುಮತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೇಸು ಅಲ್ಲಿಯೇ ಸ್ಥಗಿತಗೊಂಡಿತ್ತು.

ಇದೀಗ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಇಲ್ಲದೇ ಇರುವ ಕಾರಣ, ಪುನಃ ಇಬ್ರಾಹಿಂ ಅವರು ಕೋರ್ಟ್​ ಬಾಗಿಲಿಗೆ ಹೋಗಿದ್ದಾರೆ. ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಕಾರಣ, ವಿಚಾರಣೆ ನಡೆಸಲು ಯಾವುದೇ ಪೂರ್ವಾನುಮತಿ ಬೇಕಾಗಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಆದ್ದರಿಂದ ಅವರಿಗೆ ನೋಟಿಸ್​ ಜಾರಿಗೆ ಆದೇಶಿಸಿರುವ ಕೋರ್ಟ್​, ವಿಚಾರಣೆಗೆ ಹಾಜರಾಗುವಂತೆ ಹೇಳಿದೆ.

ಕೆಲ ದಿನಗಳ ಹಿಂದೆಯಷ್ಟೇ ಯಡಿಯೂರಪ್ಪ ಹಾಗೂ ಅವರ ಕುಟುಂಬದವರ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣವನ್ನು ಸಿಬಿಐ ಅಥವಾ ಎಸ್ಐಟಿ ತನಿಖೆಗೆ ವಹಿಸಬೇಕೆಂದು ಕೋರಿ ಪಿಐಎಲ್ ಸಲ್ಲಿಸುವುದಕ್ಕೆ ಅವಕಾಶ ನೀಡುವಂತೆ ಹೈಕೋರ್ಟ್​ನಲ್ಲಿ ಟಿ.ಜೆ.ಅಬ್ರಹಾಂ ಅರ್ಜಿ ಸಲ್ಲಿಸಿದ್ದರು. ಆದರೆ ಇದಾಗಲೇ ಒಂದು ಕೇಸ್​ ಪೆಂಡಿಂಗ್​ ಇದ್ದ ಕಾರಣ, ಇದನ್ನು ಸ್ವೀಕರಿಸಲು ಆಗುವುದಿಲ್ಲ ಎಂದು ಕೋರ್ಟ್​ ಹೇಳಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net